
ನವದೆಹಲಿ: ಹಿರಿಯ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಮಣಿರತ್ನಂ ಮತ್ತು ಸೂಪರ್‌ಸ್ಟಾರ್ ಕಮಲ್ ಹಾಸನ್ ಅವರ 'ಥಗ್ ಲೈಫ್' ಚಿತ್ರ ಪ್ರದರ್ಶನದ ಮೇಲೆ ಕರ್ನಾಟಕ ಸರ್ಕಾರ ವಿಧಿಸಿರುವ 'ನ್ಯಾಯಾಂಗೇತರ ನಿಷೇಧ'ವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.
ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಮನಮೋಹನ್ ಅವರಿದ್ದ ಪೀಠವು ಈ ವಿಷಯದಲ್ಲಿ ಕರ್ನಾಟಕದ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ (ಗೃಹ) ಮತ್ತು ಪೊಲೀಸ್ ಮಹಾನಿರ್ದೇಶಕರ ಪ್ರತಿಕ್ರಿಯೆಗಳನ್ನು ಕೋರಿದೆ ಮತ್ತು ಮುಂದಿನ ವಿಚಾರಣೆಯನ್ನು ಮಂಗಳವಾರಕ್ಕೆ (ಜೂನ್ 17) ಮುಂದೂಡಿದೆ.
ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ, ಕಮಲ್ ಹಾಸನ್ 'ಕನ್ನಡ ತಮಿಳಿನಿಂದ ಹುಟ್ಟಿದೆ' ಎಂದು ಹೇಳಿಕೊಂಡಿದ್ದು, ಕರ್ನಾಟಕದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಯಿತು.
ಬೆಂಗಳೂರಿನ ಎಂ ಮಹೇಶ್ ರೆಡ್ಡಿ ಸಲ್ಲಿಸಿದ ರಿಟ್ ಅರ್ಜಿಯಲ್ಲಿ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (CBFC) ಪ್ರಮಾಣೀಕರಣದ ಹೊರತಾಗಿಯೂ, ಕರ್ನಾಟಕ ಸರ್ಕಾರ ಮೌಖಿಕ ಸೂಚನೆಗಳು ಮತ್ತು ಪೊಲೀಸ್ ಹಸ್ತಕ್ಷೇಪದ ಮೂಲಕ ಥಗ್ ಲೈಫ್ ಚಿತ್ರ ಬಿಡುಗಡೆಯನ್ನು ತಡೆದಿದೆ ಎಂದು ಹೇಳಲಾಗಿದೆ.
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲ ಎ ವೇಲನ್, ಇಂತಹ ಕ್ರಮಗಳು ಸಂವಿಧಾನದ 19(1)(a) ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಅಸಂವಿಧಾನಿಕ ನಿರ್ಬಂಧಕ್ಕೆ ಸಮ ಎಂದರು.
ಭಾಷಾ ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡುತ್ತಿದ್ದ ಮತ್ತು ಚಿತ್ರಮಂದಿರಗಳನ್ನು ಸುಟ್ಟುಹಾಕುವಂತೆ ಕರೆ ನೀಡುತ್ತಿದ್ದ ಉಗ್ರಗಾಮಿ ಅಂಶಗಳಿಗೆ ಕರ್ನಾಟಕ ಸರ್ಕಾರ ಸಂಪೂರ್ಣವಾಗಿ 'ಶರಣಾಗಿದೆ' ಎಂದು ವೇಲನ್ ವಾದಿಸಿದರು.
ಅರ್ಜಿಯ ಪ್ರಕಾರ, ಚಿತ್ರ ಪ್ರದರ್ಶನದ ಮೇಲೆ ಹೇರಿರುವ ನಿಷೇಧವು ಕೇವಲ ಮುನ್ನೆಚ್ಚರಿಕೆಯಾಗಿರದೆ, ಚಿತ್ರ ಮಂದಿರಗಳನ್ನು ಸುಡುವುದು, ಭಾಷಾ ಅಲ್ಪಸಂಖ್ಯಾತರನ್ನು ಗುರಿಯಾಗಿಟ್ಟುಕೊಂಡು ಕೋಮು ಹಿಂಸೆ ಪ್ರೋತ್ಸಾಹಿಸುವುದು, ಹಿಂದಿನ ಹಿಂಸಾತ್ಮಕ ಘಟನೆಗಳನ್ನು, ನಿರ್ದಿಷ್ಟವಾಗಿ ತಮಿಳು ವಿರೋಧಿ ಗಲಭೆಗಳನ್ನು ಪುನರಾವರ್ತಿಸಲು ಅಪಾಯಕಾರಿ ಕರೆ ನೀಡುವುದು ಮತ್ತು ಭಯವನ್ನು ಹರಡುವ ಉದ್ದೇಶದಿಂದ ನಡೆಸಲಾದ ಸಂಘಟಿತ ಮತ್ತು ಉದ್ದೇಶಪೂರ್ವಕ ಅಭಿಯಾನಕ್ಕೆ ಪ್ರತಿಕ್ರಿಯೆಯಾಗಿತ್ತು ಎಂದು ಹೇಳಲಾಗಿದೆ.
'ಈ ಬೆದರಿಕೆಯು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆಯಾಗಿದೆ. ಹೆಚ್ಚು ಗಂಭೀರವಾಗಿ ಹೇಳುವುದಾದರೆ, ಇದು ರಾಜ್ಯದ ಜಾತ್ಯತೀತ ರಚನೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಮೇಲೆ ಯೋಜಿತ ದಾಳಿಯಾಗಿದೆ' ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಕನ್ನಡ ಭಾಷೆಯ ಮೂಲದ ಬಗ್ಗೆ ಕಮಲ್ ಹಾಸನ್ ಹೇಳಿಕೆಯಿಂದ ಉಂಟಾದ ವಿವಾದದ ನಂತರ, ಚಿತ್ರ ನಿರ್ಮಾಣ ಸಂಸ್ಥೆ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಬಳಿಕ, ಕರ್ನಾಟಕ ಹೈಕೋರ್ಟ್ ಕಮಲ್ ಹಾಸನ್ ಅವರಿಗೆ ಕ್ಷಮೆಯಾಚಿಸುವಂತೆ ಸೂಚಿಸಿತು. ಆದರೆ, ನಟ ಕ್ಷಮೆ ಕೇಳಲು ನಿರಾಕರಿಸಿದ್ದಾರೆ. ಕ್ಷಮೆಯಾಚಿಸಲು ನಿರಾಕರಿಸಿದ ಪರಿಣಾಮವಾಗಿ, ಕರ್ನಾಟಕದಲ್ಲಿ ಚಿತ್ರ ಬಿಡುಗಡೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
Advertisement