ಅಹಮದಾಬಾದ್ ವಿಮಾನ ದುರಂತ: ಸಾವಿನ ಸಂಖ್ಯೆ ವಿಚಾರದಲ್ಲಿ ತೀವ್ರ ಗೊಂದಲ; ಅಧಿಕಾರಿಗಳು ಮೌನ!
ಅಹಮದಾಬಾದ್: AI-171 ವಿಮಾನ ಅಪಘಾತದಲ್ಲಿನ ಸಾವಿನ ಸಂಖ್ಯೆ ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲ. ಆದರೆ 270 ಮೃತದೇಹಗಳನ್ನು ಪಡೆದಿರುವುದಾಗಿ ಸಿವಿಲ್ ಆಸ್ಪತ್ರೆಯ ವೈದ್ಯರು ಶನಿವಾರ ಹೇಳಿದ್ದರು. ಇದು ತೀವ್ರ ಗೊಂದಲಕ್ಕೆ ಕಾರಣವಾಗಿದ್ದು, ಅಧಿಕಾರಿಗಳು ಮೌನವಾಗಿದ್ದಾರೆ.
ಏರ್ ಇಂಡಿಯಾ ವಿಮಾನದಲ್ಲಿದ್ದ 242 ಪ್ರಯಾಣಿಕರ ಪೈಕಿ ವಿಶ್ವಾಸ್ ಮಾತ್ರ ಬದುಕುಳಿದಿದ್ದರು. ಇಲ್ಲಿವರೆಗೂ ನಾಲ್ವರು ಡಾಕ್ಟರ್ ಮತ್ತು 9 ನಾಗರಿಕರನ್ನು ಗುರುತಿಸಲಾಗಿದೆ. 272 ಡಿಎನ್ಎ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, 18 ಮೃತದೇಹಗಳನ್ನು ಗುರುತಿಸಲು ಸಾಧ್ಯವಾಗಿಲ್ಲ.
270 ಮೃತದೇಹಗಳ ಬಗ್ಗೆ ವೈದ್ಯರ ಹೇಳಿಕೆ:
ಅಹಮದಾಬಾದ್ ವಿಮಾನ ಅಪಘಾತದಲ್ಲಿನ ಅಧಿಕೃತ ಸಾವಿನ ಸಂಖ್ಯೆಯನ್ನು ಸರ್ಕಾರ ಬಹಿರಂಗಪಡಿಸದಂತೆಯೇ ವ್ಯತ್ಯಾಸಗಳು ಕಾಣುತ್ತಿವೆ. ಶನಿವಾರ ಸಿವಿಲ್ ಆಸ್ಪತ್ರೆಯ ಡಾ. ಧವಲ್ ಗಮೆಟಿ 270 ಶವಗಳನ್ನು ಪಡೆಯಲಾಗಿದೆ ಎಂದು ಮಾಧ್ಯಮಗಳಿಗೆ ಹೇಳಿದ್ದರು. ಆದರೆ ಅಧಿಕೃತ ಮಾಹಿತಿ ದೊರೆತಿಲ್ಲ. ಈ ಬಗ್ಗೆ ಅಧಿಕಾರಿಗಳು ಏನನ್ನೂ ಹೇಳುತ್ತಿಲ್ಲ.
ಬೋಯಿಂಗ್ 787-8 ಡ್ರೀಮ್ ಲೈನರ್ ವಿಮಾನದಲ್ಲಿ 169 ಭಾರತೀಯರು, 53 ಬ್ರಿಟನ್ನರು, 7 ಪೋರ್ಚುಗೀಸ್ ಮತ್ತು ಕೆನಡಾದ ಒಬ್ಬರು ಸೇರಿದಂತೆ 242 ಪ್ರಯಾಣಿಕರಿದ್ದರು ಎಂಬುದನ್ನು ಪರಿಗಣಿಸಿದರೆ ಅಧಿಕೃತ ಸಾವಿನ ಸಂಖ್ಯೆ ಬಹಿರಂಗಪಡಿಸದಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗುತ್ತದೆ.
ಅಧಿಕಾರಿಗಳು ಮೌನ: ಅಹಮದಾಬಾದ್‌ನ ಜನನಿಬಿಡ ಪ್ರದೇಶದಲ್ಲಿ ವಿಮಾನ ಅಪಘಾತಕ್ಕೀಡಾದಾಗ ನಾಲ್ಕು ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ ಕನಿಷ್ಠ 13 ಸ್ಥಳೀಯ ನಿವಾಸಿಗಳು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಡಾ. ಧವಲ್ ಗಮೆಟಿ ಹೇಳುವಂತೆ ಸಾವಿನ ಸಂಖ್ಯೆ 270 ಆಗಿದ್ದರೂ ಇತರ 16 ಜನರ ಸಾವಿನ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ನೀಡುತ್ತಿಲ್ಲ. ಇದು ಕಳವಳಕ್ಕೆ ಕಾರಣವಾಗಿದೆ.
ಹಾಸ್ಟೆಲ್‌ನ ಕೆಲವು ವೈದ್ಯರು ಮತ್ತು ನೌಕರರು ಕಾಣೆಯಾಗಿರಬಹುದು ಎಂದು ಬಿ.ಜೆ. ವೈದ್ಯಕೀಯ ಕಾಲೇಜಿನ ಮೂಲಗಳು ಹೇಳುತ್ತವೆ. ಕೆಲವು ಮೃತದೇಹಗಳನ್ನು ಗುರುತಿಸದೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎನ್ನಲಾಗಿದೆ.
ವೈದ್ಯರು ಮತ್ತು ಕ್ಯಾಂಪಸ್ ನಿವಾಸಿಗಳ ಸಾವುನೋವುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಮುಚ್ಚಿಡಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ.
DNA ಪ್ರಕ್ರಿಯೆ ಪೂರ್ಣಗೊಂಡ ಬಳಿಕವೇ ನಿಖರ ಸಾವಿನ ಸಂಖ್ಯೆ:
ಸಾವನ್ನಪ್ಪಿದ ವೈದ್ಯರ ಸಂಖ್ಯೆ ಕುರಿತು ಪ್ರತಿಕ್ರಿಯಿಸಲು ಬಿಜೆ ಮೆಡಿಕಲ್ ಡೀನ್ ಡಾ ಮೀನಾಕ್ಷಿ ಪಾರಿಖ್ ನಿರಾಕರಿಸಿದರು. ಹಾಸ್ಟೆಲ್ ಬಗ್ಗೆ ಮಾಹಿತಿ ನೀಡುತ್ತೇನೆ. ಅದನ್ನು ಮೀರಿ ಬೇರೆ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದರು. ಆದಾಗ್ಯೂ ಡಿಎನ್‌ಎ ಗುರುತಿನ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಸಾವಿನ ನಿಖರ ಸಂಖ್ಯೆಯನ್ನು ದೃಢೀಕರಿಸಲಾಗುವುದು ಎಂದು ಸರ್ಕಾರ ಹೇಳಿದೆ.
ಈ ಮಧ್ಯೆ ವಿಮಾನ ಅಪಘಾತ ಕುರಿತ ತನಿಖಾ ತಂಡ ಅಪಘಾತದ ಬಗ್ಗೆ ತನ್ನ ಔಪಚಾರಿಕ ತನಿಖೆಯನ್ನು ಪ್ರಾರಂಭಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ