
ಮನಾಲಿ: ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಮನಾಲಿಯಲ್ಲಿ ದುರಂತವೊಂದು ಸಂಭವಿಸಿದ್ದು, ಜಿಪ್ ಲೈನ್ ಹಗ್ಗ ತುಂಡಾಗಿ ಯುವತಿಯೊಬ್ಬಳು ಕಂದಕಕ್ಕೆ ಬಿದ್ದಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಈ ಘಟನೆ ನಡೆದಿದ್ದು, ಪ್ರವಾಸಕ್ಕೆಂದು ಬಂದಿದ್ದ ಮಹಾರಾಷ್ಟ್ರದ ನಾಗ್ಪುರ ಮೂಲದ ಕುಟುಂಬವೊಂದು ಇದೀಗ ಜಿಪ್ ಲೈನ್ ದುರಂತಕ್ಕೀಡಾಗಿದೆ. ಜೂನ್ 8 ರ ಭಾನುವಾರದಂದು ನಡೆದ ಈ ಘಟನೆಯು ಪ್ರವಾಸಿ ಸಾಹಸ ತಾಣಗಳಲ್ಲಿನ ಸುರಕ್ಷತಾ ಶಿಷ್ಟಾಚಾರಗಳ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ.
ನಾಗ್ಪುರದ ಯುವತಿಯಾದ ತ್ರಿಶಾ ಬಿಜ್ವೆ ತನ್ನ ಹೆತ್ತವರಾದ ಪ್ರಫುಲ್ಲ ಬಿಜ್ವೆ ಮತ್ತು ಅವರ ಪತ್ನಿಯೊಂದಿಗೆ ಮನಾಲಿಯಲ್ಲಿ ರಜೆಯಲ್ಲಿದ್ದಾಗ ಜಿಪ್‌ಲೈನ್ ಚಟುವಟಿಕೆಯಲ್ಲಿ ಭಾಗವಹಿಸುತ್ತಿದ್ದಾಗ ಭೀಕರ ಅಪಘಾತ ಸಂಭವಿಸಿದೆ.
ಕುಟುಂಬದ ಪ್ರಕಾರ, ತ್ರಿಶಾ ಬಿಜ್ವೆ ಜಿಪ್‌ಲೈನ್ ಕೇಬಲ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಕೇಬಲ್ ತುಂಡಾಗಿದೆ. ಈ ವೇಳೆ ಸುಮಾರು 30 ಅಡಿಗಳಷ್ಟು ಮೇಲಿಂದ ತ್ರಿಶಾ ನೆಲಕ್ಕೆ ಬಿದ್ದಿದ್ದಾರೆ. ಕೆಳಗೆ ಬಿದ್ದ ತ್ರಿಶಾಗೆ ತೀವ್ರ ಗಾಯಗಳಾಗಿದ್ದು ಅವರನ್ನು ಮನಾಲಿಯಾ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ದಾಖಲಿಸಲಾಗಿತ್ತು.
ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಚಂಡೀಗಢದ ಆಸ್ಪತ್ರೆ ರವಾನೆ ಮಾಡಲಾಯಿತು. ಬಳಿಕ ಅವರನ್ನು ಅವರ ತವರೂರಾದ ನಾಗ್ಪುರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲಿ ವೈದ್ಯರು ಅವರ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ನಿರ್ಲಕ್ಷ್ಯವೇ ಕಾರಣ ಕುಟುಂಬಸ್ಥರ ಆರೋಪ
ಇನ್ನು ದುರಂತಕ್ಕೆ ಆಯೋಜಕರು ಮತ್ತು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಜಿಪ್‌ಲೈನ್ ಸ್ಥಳದಲ್ಲಿ ಸಮರ್ಪಕ ಸುರಕ್ಷತಾ ಕ್ರಮಗಳು ಇರಲಿಲ್ಲ. ಘಟನೆಯ ನಂತರ ಅವರಿಗೆ ಯಾವುದೇ ತಕ್ಷಣದ ಸಹಾಯವನ್ನು ನೀಡಲಾಗಿಲ್ಲ ಎಂದು ಬಿಜ್ವೆ ಕುಟುಂಬ ಆರೋಪಿಸಿದೆ.
ಹೆಚ್ಚಿನ ಪ್ರವಾಸಿಗರೇ ಕಾರಣ
ಇನ್ನು ದುರಂತಕ್ಕೆ ಮನಾಲಿಗೆ ಧಾವಿಸುತ್ತಿರುವ ಹೆಚ್ಚಿನ ಸಂಖ್ಯೆಯ ಪ್ರವಾಸಿಗರೇ ಕಾರಣ ಎಂದು ಹೇಳಲಾಗುತ್ತಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿರುವ ನೆಟ್ಟಿಗರು ಮನಾಲಿಗೆ ಧಾವಿಸುತ್ತಿರುವ ಪ್ರವಾಸಿದರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ.
ಇದರಿಂದ ಜಿಪ್ ಲೈನ್ ಪ್ರಯಾಣ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಹೀಗಾಗಿ ನಿರತಂರ ಪ್ರಯಾಣದಿಂದ ಜಿಪ್ ಲೈನ್ ಗಳು ಸವೆದಿದ್ದು, ಅಸಮರ್ಪತ ನಿರ್ವಹಣೆ ಕೂಡ ದುರಂತಕ್ಕೆ ಕಾರಣ ಎಂದು ಹೇಳಿದ್ದಾರೆ.
Advertisement