
ಡೆಹ್ರಾಡೂನ್: ಭಾನುವಾರ ಕೇದಾರನಾಥ ಬಳಿ ಎರಡು ವರ್ಷದ ಮಗು, ಪೈಲಟ್ ಸೇರಿದಂತೆ ಏಳು ಜನರ ಸಾವಿಗೆ ಕಾರಣವಾದ ಹೆಲಿಕಾಪ್ಟರ್ ಪತನ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಹೆಲಿಕಾಪ್ಟರ್ ಸಂಸ್ಥೆಯ ವಿರುದ್ಧ ಸೋಮವಾರ ಪ್ರಕರಣ ದಾಖಲಾಗಿದೆ.
ಹೆಲಿಕಾಪ್ಟರ್ ಸೇವಾ ನಿರ್ವಹಣಾ ಸಂಸ್ಥೆ ಆರ್ಯನ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ನಿರ್ಲಕ್ಷ್ಯದ ಆರೋಪದಡಿ ಪ್ರಕರಣ ದಾಖಲಾಗಿದೆ.
ಆರ್ಯನ್ ಏವಿಯೇಷನ್‌ನ ಜವಾಬ್ದಾರಿಯುತ ವ್ಯವಸ್ಥಾಪಕ ಕೌಶಿಕ್ ಪಾಠಕ್ ಮತ್ತು ವ್ಯವಸ್ಥಾಪಕ ವಿಕಾಸ್ ತೋಮರ್ ವಿರುದ್ಧ ಸೋನ್‌ಪ್ರಯಾಗ್ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಮತ್ತು ವಿಮಾನ ಕಾಯ್ದೆ 1934ರ ಸೆಕ್ಷನ್ 10 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರಾಜೀವ್ ನಖೋಲಿಯಾ ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದಬಂದಿದೆ.
ದುರಂತವು ಬೆಳಿಗ್ಗೆ 5.30ರ ಸುಮಾರಿಗೆ ಸಂಭವಿಸಿದೆ. ಆದರೆ, ಆರ್ಯನ್ ಏವಿಯೇಷನ್‌ಗೆ ಹೆಲಿಕಾಪ್ಟರ್ ಸಂಸ್ಥೆಗೆ ಜೂನ್ 15 ರಂದು ಕಾರ್ಯಾಚರಣೆಗಾಗಿ ಬೆಳಿಗ್ಗೆ 6 ರಿಂದ 7 ರವರೆಗೆ ಮೊದಲ ಸ್ಲಾಟ್ ನೀಡಲಾಗಿತ್ತು, ಆದರೆ, ಅದಕ್ಕೂ ಮೊದಲೇ ಕಾರ್ಯಾಚರಣೆ ಆರಂಭಿಸಲಾಗಿದ್ದು, ಇದರಿಂದ ದುರಂತ ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದಲ್ಲದೆ, ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣವಿದ್ದರೂ, ಹೆಲಿಕಾಪ್ಟರ್ ಹಾರುವ ಮೊದಲು ಹವಾಮಾನ ಪರಿಸ್ಥಿತಿಗಳನ್ನು ಪರಿಶೀಲಿಸಲಾಗಿಲ್ಲ. ಡಿಜಿಸಿಎ ಮತ್ತು ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರ ಹೊರಡಿಸಿದ ಎಸ್‌ಒಪಿಯನ್ನು ನಿರ್ಲಕ್ಷಿಸಲಾಗಿದೆ. ಇಂತಹ ಕ್ರಮಗಳು ಜೀವ ಮತ್ತು ಆಸ್ತಿಪಾಸ್ತಿಗಳ ನಷ್ಟಕ್ಕೆ ಕಾರಣವಾಗುತ್ತದೆ ಎಂದು ಕಂಪನಿಯ ವ್ಯವಸ್ಥಾಪಕರಿಗೆ ಚೆನ್ನಾಗಿ ತಿಳಿದಿತ್ತು. ಆದರೂ ನಿರ್ಲಕ್ಷ್ಯ ತೋರಿದ್ದಾರೆಂದು ತಿಳಿಸಿದ್ದಾರೆ.
Advertisement