
ನವದೆಹಲಿ: ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ 224 ನಾಗರಿಕರು ಹತ್ಯೆಯಾಗಿದ್ದಾರೆ, ಇತರ 1,257 ಮಂದಿ ಗಾಯಗೊಂಡಿದ್ದಾರೆ ಎಂದು ಭಾರತದಲ್ಲಿನ ಇರಾನ್ ರಾಯಭಾರ ಕಚೇರಿ ಮಂಗಳವಾರ ತಿಳಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಇರಾನ್ ರಾಯಭಾರ ಕಚೇರಿ, ಜೂನ್ 13, 2025 ರಂದು ಕ್ರೂರ ಯಹೂದಿಗಳ ಆಡಳಿತ, ಇರಾನ್ ನ ವಸತಿ ಪ್ರದೇಶಗಳು ಸೇರಿದಂತೆ ಹಲವಾರು ಸ್ಥಳಗಳ ಮೇಲೆ ಮಿಲಿಟರಿ ದಾಳಿ ನಡೆಸುವ ಮೂಲಕ ಅಮಾಯಕ ಮಹಿಳೆಯರು ಮತ್ತು ಮಕ್ಕಳನ್ನು ಹತ್ಯೆ ಮಾಡಿದೆ ಎಂದು ಮಾಹಿತಿ ನೀಡಿದೆ.
ಅಲ್ಲದೇ, ಇರಾನ್‌ನ ಪ್ರಾದೇಶಿಕ ಸಮಗ್ರತೆ ಮತ್ತು ರಾಷ್ಟ್ರೀಯ ಸಾರ್ವಭೌಮತ್ವವನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುದಾಗಿ ಆರೋಪಿಸಿದೆ.
"ಈ ಕ್ರೂರ ಮಿಲಿಟರಿ ದಾಳಿಯ ಪರಿಣಾಮವಾಗಿ ಎಲ್ಲಾ ಅಂತಾರಾಷ್ಟ್ರೀಯ ತತ್ವಗಳು ಮತ್ತು ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 224 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 1,257 ಇತರರು ಗಾಯಗೊಂಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದಲ್ಲದೆ, ಇರಾನ್‌ನ ಮೇಲೆ ಜಿಯೋನಿಸ್ಟ್ ಆಡಳಿತದ ಕಾನೂನುಬಾಹಿರ ಮಿಲಿಟರಿ ದಾಳಿಗಳು ಯುಎನ್ ಚಾರ್ಟರ್‌ನ ಆರ್ಟಿಕಲ್ 2(4) ರ ಸ್ಪಷ್ಟ ಉಲ್ಲಂಘನೆಯಾಗಿದೆ ಮತ್ತು ಇರಾನ್ ವಿರುದ್ಧದ ಆಕ್ರಮಣಕಾರಿ ಕೃತ್ಯಗಳಾಗಿವೆ. ಪರಮಾಣು ಸಮಸ್ಯೆಗಳು ಸೇರಿದಂತೆ ವಿವಾದಗಳನ್ನು ಇತ್ಯರ್ಥಪಡಿಸುವ ಸಲುವಾಗಿ ವಿಶ್ವಸಂಸ್ಥೆ ಜೊತೆ ಪರೋಕ್ಷ ಮಾತುಕತೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಇರಾನ್ ಅಂತಾರಾಷ್ಟ್ರೀಯ ಕಾನೂನಿಗೆ ಗೌರವವನ್ನು ತೋರಿಸುತ್ತಿದ್ದಾಗ ಇಸ್ರೇಲ್ ಮಿಲಿಟರಿ ದಾಳಿ ಪ್ರಾರಂಭಿಸಿತು ಎಂದು ರಾಯಭಾರ ಕಚೇರಿ ಆರೋಪಿಸಿದೆ.
Advertisement