
ಅಹಮದಾಬಾದ್: ಜೂನ್ 12 ರಂದು ಸಂಭವಿಸಿದ ಏರ್ ಇಂಡಿಯಾದ AI-171 ವಿಮಾನ ಅಪಘಾತ ಕುರಿತು ಎಲ್ಲಾ ಆಯಾಮಗಳಲ್ಲಿ ಕೇಂದ್ರಿಯ ಭದ್ರತಾ ಏಜೆನ್ಸಿಗಳು ತನಿಖೆ ನಡೆಸುತ್ತಿವೆ.
ಅಹಮದಾಬಾದ್ ನ ಸರ್ದಾರ್ ವಲ್ಲಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣಾ ಸಿಬ್ಬಂದಿಯನ್ನು ವಿಚಾರಣೆ ನಡೆಸಿದ್ದು, ಫೋರೆನ್ಸಿಕ್ ವಿಶ್ಲೇಷಣೆಗಾಗಿ ಅವರ ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ವಿಮಾನ ಪೂರ್ವ ತಪಾಸಣೆ ಮತ್ತು ಗ್ರೌಂಡ್ ಆಪರೇಷನ್ ನಲ್ಲಿ ತೊಡಗಿದ್ದ ಎಲ್ಲಾ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಅವರ ಹೇಳಿಕೆಗಳನ್ನು ಔಪಚಾರಿಕವಾಗಿ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ದೃಢಪಡಿಸಿದ್ದಾರೆ.
ಯಾವುದೇ ಅನುಮಾನಾಸ್ಪದ ಚಟುವಟಿಕೆ ಅಥವಾ ಮಾತುಕತೆ ನಡೆದಿದ್ದೆಯೇ? ಎಂಬುದನ್ನು ಪರೀಕ್ಷಿಸಲು ವಿಮಾನ ಟೇಕಾಫ್ ಗೂ ಮುನ್ನಾ ಅದನ್ನು ನಿರ್ವಹಿಸಿದ ಸಿಬ್ಬಂದಿಯ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ತನಿಖೆ ಪ್ರಗತಿಯಲ್ಲಿದ್ದು, ಏಜೆನ್ಸಿಗಳು ವಿಮಾನ ನಿಲ್ದಾಣದ ಆವರಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಯಾವುದೇ ವಿವರಗಳನ್ನು ಕಡೆಗಣಿಸುವುದಿಲ್ಲ ಎಂದು ಖಾತ್ರಿಪಡಿಸಲಾಗಿದೆ.
ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಯಾವುದೇ ಊಹೆಗಳಿಗೆ ಅವಕಾಶವಿಲ್ಲದಂತೆ ಮಾನವ ದೋಷ, ತಾಂತ್ರಿಕ ವೈಫಲ್ಯ ಮತ್ತು ವಿಧ್ವಂಸಕತೆ ಸೇರಿದಂತೆ ಎಲ್ಲಾ ದಿಕ್ಕಿನಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದರು.
ಜೂನ್ 12 ರಂದು ಏರ್ ಇಂಡಿಯಾದ ಬೋಯಿಂಗ್ 787-8 ಡ್ರೀಮ್ ಲೈನರ್ ವಿಮಾನ AI-171 ಟೇಕಾಪ್ ಆದ ಕೆಲ ಸೆಕೆಂಡ್ ಗಳಲ್ಲಿ ಮಧ್ಯಾಹ್ನ 1-30ರ ವೇಳೆಯಲ್ಲಿ ಅಪಘಾತಕ್ಕೀಡಾಗಿತ್ತು. ಏರ್ ಟ್ರಾಫಿಕ್ ಕಂಟ್ರೋಲ್ ಗೆ 'ಮೇ ಡೇ' ಎಂದು ಪೈಲಟ್ ಕರೆ ನೀಡಿದ ತಕ್ಷಣವೇ ವಿಮಾನ ಕೆಳಗೆ ಬಿದ್ದಿತ್ತು. ಜೂನ್ 16 ರಂದು ಅಹಮದಾಬಾದ್ ಗೆ ಬಂದಿಳಿದಿ ಬೋಯಿಂಗ್ ನ ತಾಂತ್ರಿಕ ತಂಡವೊಂದು ತನಿಖೆ ತಂಡವನ್ನು ಸೇರಿಕೊಂಡಿದೆ.
ಕಾಕ್ ಪಿಟ್ ಧ್ವನಿ ರೆಕಾರ್ಡರ್ ಮತ್ತು ವಿಮಾನದ ಎರಡನೇ ಬ್ಲಾಕ್ ಬಾಕ್ಸ್ ನ್ನು ತನಿಖಾ ತಂಡಗಳು ವಶಕ್ಕೆ ಪಡೆದಿವೆ. ಕಳೆದ ಶುಕ್ರವಾರ ವಿಮಾನದ ಮೊದಲ ಬ್ಲಾಕ್ ಬಾಕ್ಸ್ ಪತ್ತೆಯಾಗಿತ್ತು. ಏರ್‌ಕ್ರಾಫ್ಟ್ ಆ್ಯಕ್ಸಿಡೆಂಟ್ ಇನ್ವೆಸ್ಟಿಗೇಷನ್ ಬ್ಯೂರೋ (AAIB) ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ.
Advertisement