
ಅಹಮದಾಬಾದ್: ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಸಾವಿಗೀಡಾದ 270 ಜನರ ಪೈಕಿ ಡಿಎನ್ಎ ಪರೀಕ್ಷೆಗಳ ಮೂಲಕ 220 ಸಂತ್ರಸ್ತರನ್ನು ಗುರುತಿಸಲಾಗಿದೆ ಮತ್ತು ಅವರಲ್ಲಿ 202 ಜನರ ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಎಂದು ಗುಜರಾತ್ ಸಚಿವರು ಶುಕ್ರವಾರ ತಿಳಿಸಿದ್ದಾರೆ.
ಜೂನ್ 12 ರಂದು ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ 242 ಜನರನ್ನು ಹೊತ್ತು ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI-171 ಅಹಮದಾಬಾದ್‌ನಲ್ಲಿ ಪತನಗೊಂಡಿತ್ತು.
ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲಿಯೇ ಮೇಘಾನಿನಗರ ಪ್ರದೇಶದಲ್ಲಿರುವ ವೈದ್ಯಕೀಯ ಸಂಕೀರ್ಣಕ್ಕೆ ಡಿಕ್ಕಿ ಹೊಡೆಯಿತು. ವಿಮಾನದಲ್ಲಿದ್ದ ಒಬ್ಬ ವ್ಯಕ್ತಿಯನ್ನು ಹೊರತುಪಡಿಸಿ ಉಳಿದೆಲ್ಲರೂ ಸಾವಿಗೀಡಾಗಿದ್ದರು ಮತ್ತು ಅಪಘಾತಕ್ಕೀಡಾದ ಸ್ಥಳದಲ್ಲಿದ್ದ 29 ಜನರು ಮೃತಪಟ್ಟಿದ್ದರು.
ಹಲವಾರು ದೇಹಗಳು ಗುರುತಿಸಲಾಗದಷ್ಟು ಸುಟ್ಟುಹೋಗಿವೆ ಅಥವಾ ಹಾನಿಗೊಳಗಾಗಿವೆ. ಆದ್ದರಿಂದ ಸಂತ್ರಸ್ತರ ಗುರುತನ್ನು ಪತ್ತೆಹಚ್ಚಲು ಅಧಿಕಾರಿಗಳು ಡಿಎನ್ಎ ಪರೀಕ್ಷೆ ನಡೆಸುತ್ತಿದ್ದಾರೆ. ಇಲ್ಲಿಯವರೆಗೆ, 220 ಡಿಎನ್‌ಎ ಮಾದರಿಗಳನ್ನು ಹೊಂದಿಸಲಾಗಿದೆ ಮತ್ತು ಈ ಸಂತ್ರಸ್ತರ ಸಂಬಂಧಿಕರನ್ನು ಸಂಪರ್ಕಿಸಲಾಗಿದೆ. 202 ಸಂತ್ರಸ್ತರ ಮೃತದೇಹಗಳನ್ನು ಈಗಾಗಲೇ ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.
'ಇನ್ನುಳಿದ ಸಂತ್ರಸ್ತರನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ' ಎಂದು ಆರೋಗ್ಯ ಸಚಿವ ಮತ್ತು ಗುಜರಾತ್ ಸರ್ಕಾರದ ವಕ್ತಾರ ರುಷಿಕೇಶ್ ಪಟೇಲ್ ಹೇಳಿದ್ದಾರೆ.
ಈ 202 ವ್ಯಕ್ತಿಗಳಲ್ಲಿ 160 ಭಾರತೀಯರು ಸೇರಿದ್ದಾರೆ. ಉಳಿದ ಪ್ರಯಾಣಿಕರ ಪೈಕಿ ಏಳು ಮಂದಿ ಪೋರ್ಚುಗೀಸ್ ಪ್ರಜೆಗಳು, 34 ಬ್ರಿಟಿಷ್ ಪ್ರಜೆಗಳು ಮತ್ತು ಒಬ್ಬ ಕೆನಡಾದವರು ಸೇರಿದ್ದಾರೆ ಎಂದು ಪಟೇಲ್ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
15 ಸಂತ್ರಸ್ತರ ಮೃತದೇಹಗಳನ್ನು ವಿಮಾನದ ಮೂಲಕ ಅವರವರ ಸ್ಥಳಗಳಿಗೆ ಕಳುಹಿಸಲಾಗಿದ್ದು, 187 ಜನರನ್ನು ರಸ್ತೆ ಮೂಲಕ ಸಾಗಿಸಲಾಗಿದೆ ಎಂದು ಸಚಿವರು ಹೇಳಿದರು.
Advertisement