
ಭುವನೇಶ್ವರ: ಒಡಿಶಾದ ಪುರಿಯಲ್ಲಿರುವ ಜಗನ್ನಾಥನ ದರ್ಶನಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಾಷಿಂಗ್ಟನ್‌ಗೆ ಭೇಟಿ ನೀಡುವ ಆಹ್ವಾನವನ್ನು ತಿರಸ್ಕರಿಸಿದೆ ಎಂದು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಇಂದು ಭುವನೇಶ್ವರದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, "ನಾನು ಜಿ7 ಶೃಂಗಸಭೆಗಾಗಿ ಕೆನಡಾದಲ್ಲಿದ್ದಾಗ ಅಮೆರಿಕ ಅಧ್ಯಕ್ಷ ಟ್ರಂಪ್ ನನಗೆ ಕರೆ ಮಾಡಿ, ವಾಷಿಂಗ್ಟನ್‌ಗೆ ಆಹ್ವಾನಿಸಿ, ಔತಣ ಕೂಟದಲ್ಲಿ ಭಾಗವಹಿಸುವಂತೆ ಕೇಳಿಕೊಂಡಿದ್ದರು. ಆದರೆ ನಾನು ಅವರ ಆಹ್ವಾನಕ್ಕಾಗಿ ಧನ್ಯವಾದ ಹೇಳಿ, ಜಗನ್ನಾಥನ ನಾಡು ಒಡಿಶಾಗೆ ಭೇಟಿ ನೀಡಬೇಕಾಗಿದೆ ಎಂದು ತಿಳಿಸಿದೆ. ನಾನು ಅವರ ಆಹ್ವಾನವನ್ನು ವಿನಮ್ರವಾಗಿ ತಿರಸ್ಕರಿಸಿದೆ" ಎಂದರು.
ಒಡಿಶಾದಲ್ಲಿ ಬಿಜೆಪಿ ಸರ್ಕಾರದ ಮೊದಲ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು ಮತ್ತು ಇದೇ ವೇಳೆ 18,600 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಚಾಲನೆ ನೀಡಿದರು.
ಜಿ7 ಶೃಂಗಸಭೆ ವೇಳೆ ಪ್ರಧಾನಿ ಮೋದಿ ಅವರು, ಭಾರತ ಹಾಗೂ ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆ ಕುರಿತು ಎರಡೂ ದೇಶಗಳ ಪರಸ್ಪರ ಒಪ್ಪಿಗೆ ಬಳಿಕ ಕದನ ವಿರಾಮ ಘೋಷಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಸ್ಪಷ್ಟನೆ ನೀಡಿದ್ದರು.
ಜಿ7 ಶೃಂಗಸಭೆಗೆ ಭೇಟಿ ನೀಡಿದ್ದ ವೇಳೆ ಅಮೆರಿಕಗೆ ಭೇಟಿ ನೀಡುವಂತೆ ಟ್ರಂಪ್, ಪ್ರಧಾನಿ ಮೋದಿ ಅವರಿಗೆ ಆಹ್ವಾನಿಸಿದ್ದರು. ಆದರೆ ಮೊದಲೇ ವೇಳಾಪಟ್ಟಿ ನಿಗದಿಯಾಗಿದ್ದ ಹಿನ್ನೆಲೆ ಅಮೆರಿಕಗೆ ಭೇಟಿ ನೀಡಲು ಸಾಧ್ಯವಿಲ್ಲ ಎಂದು ಮೋದಿ ತಿಳಿಸಿರುವುದಾಗಿ ವರದಿಯಾಗಿತ್ತು.
Advertisement