
ರಾಂಚಿ: ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿ ಶುಕ್ರವಾರ ಮದುವೆ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಬೊಲೆರೊ ವಾಹನ ಹಾಗೂ ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಭೀಕರ ಅಪಘಾತದಲ್ಲಿ ಒಂಬತ್ತು ಜನ ಸಾವನ್ನಪ್ಪಿದ್ದಾರೆ.
ಇಂದು ಬೆಳಗ್ಗೆ ಜಾರ್ಖಂಡ್-ಪಶ್ಚಿಮ ಬಂಗಾಳ ಗಡಿಯಲ್ಲಿ ಈ ಅಪಘಾತ ನಡೆದಿದ್ದು, ಬೊಲೆರೊದಲ್ಲಿದ್ದ ಒಂಬತ್ತು ಮಂದಿ ಮೃತಪಟ್ಟಿದ್ದಾರೆ ಎಂದು ನೀಮ್ದಿಹ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಸಂತನ್ ತಿವಾರಿ ಅವರು ತಿಳಿಸಿದ್ದಾರೆ.
ಜಾರ್ಖಂಡ್‌ನ ಸೆರೈಕೆಲಾ-ಖರ್ಸವಾನ್ ಜಿಲ್ಲೆಯ ಚಾಂಡಿಲ್ ಉಪವಿಭಾಗದ ಗಡಿಯಲ್ಲಿರುವ ಪಶ್ಚಿಮ ಬಂಗಾಳದ ಬಲರಾಂಪುರ ಪೊಲೀಸ್ ಠಾಣೆ ಪ್ರದೇಶದ ನಾಮ್ಶೋಲ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಮಹೀಂದ್ರಾ ಬೊಲೆರೊದಲ್ಲಿ ಪ್ರಯಾಣಿಸುತ್ತಿದ್ದ ಒಂಬತ್ತು ಜನ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಮದುವೆ ಸಮಾರಂಭದಲ್ಲಿ ಭಾಗವಹಿಸಿದ ಹಿಂತಿರುಗುತ್ತಿದ್ದರು ಎಂದು ತಿವಾರಿ ಹೇಳಿದ್ದಾರೆ.
ಡಿಕ್ಕಿಯ ರಭಸಕ್ಕೆ ಟ್ರಕ್ ಭತ್ತದ ಗದ್ದೆಗೆ ನುಗ್ಗಿ ಪಲ್ಟಿಯಾಗಿದ್ದು, ಕಾರಿನಲ್ಲಿದ್ದ ಒಂಬತ್ತೂ ಮಂದಿ ಸ್ಥಳದಲ್ಲೇ ಅಸುನೀಗಿದ್ದಾರೆ.
ಮಾಹಿತಿ ತಿಳಿದ ತಕ್ಷಣ ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಎಲ್ಲರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪುರುಲಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.
ಸ್ಥಳೀಯರು ಹೇಳುವಂತೆ ಟ್ರಕ್ ಅತಿ ವೇಗದಲ್ಲಿ ಚಲಿಸುತ್ತಿತ್ತು ಮತ್ತು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬೊಲೆರೊಗೆ ಡಿಕ್ಕಿ ಹೊಡೆದಿದೆ. ಅಪಘಾತದ ನಂತರ, ಬಲರಾಂಪುರ ಮತ್ತು ಚಾಂಡಿಲ್ ಪೊಲೀಸರು ಮತ್ತು ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ನಜ್ಜುಗುಜ್ಜಾದ ವಾಹನದಿಂದ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಪೊಲೀಸರು ಟ್ರಕ್ ಅನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಮತ್ತು ಪ್ರಸ್ತುತ ಚಾಲಕನ ಪತ್ತೆಗೆ ಹುಡುಕಾಟ ನಡೆಯುತ್ತಿದೆ.
Advertisement