
ಪುಣೆ: ಮಹಾರಾಷ್ಟ್ರದ ಪುಣೆ ಬಳಿ ಬುಧವಾರ ರಾತ್ರಿ ಭೀಕರ ಅಪಘಾತ ಸಂಭವಿಸಿದೆ. ನಿಂತಿದ್ದ ಪಿಕ್ ಅಪ್ ವಾಹನಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಎಂಟು ಮಂದಿ ದುರ್ಮರಣ ಹೊಂದಿದ್ದಾರೆ.
ಪುಣೆ ಜಿಲ್ಲೆಯ ಜೆಜೂರಿ-ಮೋರ್ಗಾಂವ್ ರಸ್ತೆಯಲ್ಲಿ ರಾತ್ರಿ 7-15ರ ಸುಮಾರಿನಲ್ಲಿ ಈ ಅಪಘಾತ ನಡೆದಿದ್ದು, ವೇಗವಾಗಿ ಬಂದ ಕಾರು ಪಿಕ್ ಅಪ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಇತರ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಿಂದ ಕಾರಿನಲ್ಲಿದ್ದ ನಾಲ್ವರು ಪುರುಷರು ಮತ್ತು ಮಹಿಳೆ, ಪಿಕ್ ಅಪ್ ವಾಹನದ ಚಾಲಕ ಮತ್ತು ಟ್ರಕ್ ಬಳಿ ನಿಂತಿದ್ದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಪುಣೆ ಗ್ರಾಮಾಂತರ ಪೊಲೀಸ್ ಅಧೀಕ್ಷಕ ಸಂದೀಪ್ ಸಿಂಗ್ ಗಿಲ್ ತಿಳಿಸಿದ್ದಾರೆ.
ಪಿಕ್ ಅಪ್ ವಾಹನ ಶ್ರೀರಾಮ್ ಹೋಟೆಲ್ ಬಳಿ ನಿಂತಿದ್ದಾಗ ಜೆಜೂರಿ ಕಡೆಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯ ರಭಸಕ್ಕೆ ಹೋಟೆಲ್ ಮಾಲೀಕರು, ಕಾರ್ಮಿಕರು ಮತ್ತು ಕಾರಿನಲ್ಲಿದ್ದವರು ಸೇರಿದಂತೆ ಎಂಟು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳು ಮತ್ತು ಮಹಿಳೆ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ.
ಅಪಘಾತಕ್ಕೆ ನಿಖರವಾದ ಕಾರಣ ತಿಳಿಯಲು ಪೊಲೀಸ್ ಅಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Advertisement