
ಮುಜಫರ್ ನಗರ: ಉತ್ತರ ಪ್ರದೇಶದ ಮುಜಫರ್ ನಗರದ ರೋಡ್ಕಲಿ ಗ್ರಾಮದಲ್ಲಿ 24 ವರ್ಷದ ಮಹಿಳೆಯೊಬ್ಬರು ತನ್ನ ಪ್ರಿಯಕರನೊಂದಿಗೆ ಸೇರಿ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಇಬ್ಬರು ಮಕ್ಕಳನ್ನು ಕೊಂದಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಹೆತ್ತ ಮಗ ಹಾಗೂ ಮಗಳನ್ನು ಹತ್ಯೆ ಮಾಡಿದ ಆರೋಪದ ಮೇಲೆ ಮುಸ್ಕಾನ್ ಎಂಬ ಮಹಿಳೆಯನ್ನು ಬಂಧಿಸಲಾಗಿದ್ದು, ಆಕೆಯ ಪ್ರೇಮಿ ಜುನೈದ್ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಸ್ಕಾನ್ ಅವರ ಇಬ್ಬರು ಮಕ್ಕಳಾದ ಐದು ವರ್ಷದ ಮಗಳು ಎನಾಯಾ ಮತ್ತು ಒಂದು ವರ್ಷದ ಮಗ ಅರ್ಹಾನ್ ಇಬ್ಬರೂ ಗುರುವಾರ ಅವರ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್ ವರದಿಗಾರರಿಗೆ ಮಾಹಿತಿ ನೀಡಿದ್ದಾರೆ.
"ತನಿಖೆಯಲ್ಲಿ ತಾಯಿಯು ಮಕ್ಕಳನ್ನು ಹತ್ಯೆ ಮಾಡಿರುವುದು ಬಹಿರಂಗವಾಗಿದೆ ಮತ್ತು ಅವರನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆಯ ಸಮಯದಲ್ಲಿ, ಅವರು ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ" ಎಂದು ಅಧಿಕಾರಿ ತಿಳಿಸಿದ್ದಾರೆ.
ತನ್ನ ಪ್ರಿಯಕರ ಜುನೈದ್ ಜೊತೆ ಹನಿಮೂನ್‌ಗೆ ಹೋಗಲು ಮತ್ತು ಹೊಸ ಜೀವನ ಆರಂಭಿಸಲು ಮಕ್ಕಳು ಅಡ್ಡಿಯಾಗುತ್ತಿದ್ದಾರೆ ಎಂದು ಮುಸ್ಕಾನ್ ಹೇಳಿದ್ದು, ಆದ್ದರಿಂದ ಅವರನ್ನು ಕೊಲ್ಲಲು ನಿರ್ಧರಿಸಿದೆ ಎಂದು ಮಹಿಳೆ ತಿಳಿಸಿದ್ದಾರೆ.
"ಮಹಿಳೆ ಮಕ್ಕಳಿಗೆ ವಿಷ ನೀಡಿ, ಕೊಲೆ ಮಾಡಿದ್ದಾರೆ" ಎಂದು ಅಧಿಕಾರಿ ಹೇಳಿದ್ದಾರೆ.
ಮುಸ್ಕಾನ್ ಬಹಳ ದಿನಗಳಿಂದ ಜುನೈದ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಆಕೆಯ ಪತಿ ವಸೀಮ್ ಪ್ರಸ್ತುತ ಚಂಡೀಗಢದಲ್ಲಿ ಕೆಲಸ ಮಾಡುತ್ತಿದ್ದಾರೆ.
Advertisement