
ಗುಂಟೂರು: ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದ್ದು ಮಾಜಿ ಸಿಎಂ ಹಾಗೂ ವೈಎಸ್ ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ ಮೋಹನ್ ರೆಡ್ಡಿ (Jagan Mohan Reddy) ರೋಡ್ ಶೋ ವೇಳೆ ವ್ಯಕ್ತಿಯೋರ್ವ ಅವರ ಕಾರಿನ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ.
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಅವರು ಪಲ್ನಾಡು ಜಿಲ್ಲೆಗೆ ಭೇಟಿ ನೀಡುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಗುಂಟೂರು ಜಿಲ್ಲೆಯ ಎಟುಕುರು ಬಳಿಯ ಲಾಲ್‌ಪುರಂ ಹೆದ್ದಾರಿಯಲ್ಲಿ ವೈಎಸ್‌ಆರ್‌ಸಿಪಿ ಆಯೋಜಿಸಿದ್ದ ರ‍್ಯಾಲಿ ವೇಳೆ ಜಗನ್ ಪ್ರಯಾಣಿಸುತ್ತಿದ್ದ ಕಾರು ವ್ಯಕ್ತಿ ಮೇಲೆ ಹರಿದಿದ್ದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಜಗನ್ ತಮ್ಮ ಬೆಂಗಾವಲು ಪಡೆಯೊಂದಿಗೆ ಬರುತ್ತಿದ್ದಾಗ ಅವರ ಕಾರನ್ನು ಅವರ ಅಭಿಮಾನಿಗಳು ತಡೆದಿದ್ದು ಈ ವೇಳೆ ಓರ್ವ ವ್ಯಕ್ತಿ ಜಗನ್ ಇದ್ದ ಕಾರಿನ ಕೆಳಗೆ ಬಿದ್ದಿದ್ದಾನೆ. ಇದನ್ನು ಗಮನಿಸದ ಜಗನ್ ಕಾರು ಚಾಲಕ ಕಾರನ್ನು ಮುಂದಕ್ಕೆ ಚಲಾಯಿಸಿದ್ದು ಈ ವೇಳೆ ಕಾರಿನ ಚಕ್ರ ವ್ಯಕ್ತಿಯ ಕುತ್ತಿಗೆ ಮೇಲೆ ಹರಿದಿದೆ. ಈ ವೇಳೆ ಜನ ಕೂಗಿದಾಗ ಚಾಲಕ ಕಾರು ನಿಲ್ಲಿಸಿದ್ದಾನೆ.
ಕೂಡಲೇ ಜನರು ಗಂಭೀರವಾಗಿ ಗಾಯಗೊಂಡ ಆ ವ್ಯಕ್ತಿಯನ್ನು ಸ್ಥಳೀಯರು ಗುಂಟೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಆದರೆ ಆ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಸಾವನ್ನಪ್ಪಿದ ವೃದ್ಧನನ್ನು ವೈಎಸ್ ಆರ್ ಪಿ ಕಾಂಗ್ರೆಸ್ ಕಾರ್ಯಕರ್ತ ಚೀಲಿ ಸಿಂಘಯ್ಯ ಎಂದು ತಿಳಿದುಬಂದಿದೆ.
ವ್ಯಕ್ತಿ ಕಾರಿನ ಕೆಳಗೆ ಬಿದ್ದರೂ ಅರಿವಿಲ್ಲದೇ ಜನರತ್ತ ಕೈ ಬೀಸುತ್ತಿದ್ದ ಜಗನ್
ಇನ್ನು ಈ ದುರಂತ ವೇಳೆ ಅದೇ ಕಾರಿನಲ್ಲಿದ್ದ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಇದರ ಅರಿವೇ ಇಲ್ಲದೇ ಜನರತ್ತ ಕೈ ಬೀಸುತ್ತಿದ್ದರು. ಅವರ ಅಭಿಮಾನಿಗಳು ಕೂಡ ಇದಾವುದನ್ನೂ ಲೆಕ್ಕಿಸದೇ ಅವರತ್ತ ನುಗ್ಗಿ ಬರುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಅಂದಹಾಗೆ ವೈ.ಎಸ್. ಜಗನ್ ಅವರು ಪಲ್ನಾಡು ಜಿಲ್ಲೆಯ ಸತ್ತೇನಪಲ್ಲಿ ಮಂಡಲದ ರೆಂಟಪಲ್ಲಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ, ಜಗನ್ ತಮ್ಮ ತಡೆಪಲ್ಲಿಗೂಡೆಂ ನಿವಾಸದಿಂದ ಬೃಹತ್ ಬೆಂಗಾವಲು ಪಡೆಯೊಂದಿಗೆ ರೆಂಟಪಲ್ಲಕ್ಕೆ ತೆರಳಿದರು. ಈ ಸಂದರ್ಭದಲ್ಲಿಯೇ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.
Advertisement