
ಕಲ್ಯಾಣಿ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಅನ್ಯ ಧರ್ಮದ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕೆ ಕೋಪಗೊಂಡ ಯುವತಿಯ ಕುಟುಂಬವು ಮಗಳ 'ಶ್ರಾದ್ಧ'ವನ್ನು ನಡೆಸಿದೆ.
ತಮ್ಮ ಕುಟುಂಬಕ್ಕೆ ಅವಮಾನ ಮಾಡಿದ ಕಾರಣ 'ಶ್ರಾದ್ಧ' ನಡೆಸಲಾಗಿದೆ ಮತ್ತು ನಮ್ಮ ಪಾಲಿಗೆ ಅವಳು 'ಸತ್ತಿದ್ದಾಳೆ' ಎಂದು ಕುಟುಂಬ ಹೇಳಿದೆ.
ಮಗಳು ಬೇರೆ ಧರ್ಮದ ವ್ಯಕ್ತಿಯೊಂದಿಗೆ ಓಡಿಹೋಗಿ ಮದುವೆಯಾಗಿದ್ದು, ಅದಾದ 12 ದಿನಗಳ ನಂತರ ಈ ಆಚರಣೆಯನ್ನು ನಡೆಸಲಾಯಿತು.
'ಅವಳು ನಮಗೆ ಸತ್ತಂತೆ. ನಾವು ಅವಳ ಮದುವೆಯನ್ನು ನಿಶ್ಚಯಿಸಿದ್ದೆವು. ಆದರೆ, ಅವಳು ನಮ್ಮ ಮಾತನ್ನು ಕೇಳಲಿಲ್ಲ. ಈ ರೀತಿ ನಮ್ಮನ್ನು ಬಿಟ್ಟು ಹೋಗುವ ಮೂಲಕ ಅವಳು ನಮಗೆ ಅಪಖ್ಯಾತಿ ಉಂಟು ಮಾಡಿದ್ದಾಳೆ. ಇಲ್ಲಿಗೆ ಎಲ್ಲವೂ ಮುಗಿಯಿತು' ಎಂದು ಆಕೆಯ ಚಿಕ್ಕಪ್ಪ ಸೋಮನಾಥ್ ಬಿಸ್ವಾಸ್ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.
ತಲೆ ಬೋಳಿಸುವುದು ಸೇರಿದಂತೆ 'ಶ್ರಾದ್ಧ'ದ ಎಲ್ಲ ವಿಧಿಗಳನ್ನು ಅನುಸರಿಸಲಾಯಿತು. ಆಚರಣೆಯ ಸ್ಥಳದಲ್ಲಿ ಯುವತಿಯ ಫೋಟೊವನ್ನು ಇಟ್ಟು ಹಾರವನ್ನು ಹಾಕಲಾಗಿತ್ತು.
'ನಾವು ಅವಳಿಗೆ ಸಂಬಂಧಿಸಿದ ಎಲ್ಲ ವಸ್ತುಗಳನ್ನು ಸುಟ್ಟು ಹಾಕಿದ್ದೇವೆ' ಎಂದು ಅವಳ ತಾಯಿ ಹೇಳಿದರು.
ಸ್ಥಳೀಯ ಕಾಲೇಜಿನಲ್ಲೇ ಓದುತ್ತಿದ್ದ ವಿದ್ಯಾರ್ಥಿನಿಗಾಗಿ ಆಕೆಯ ಕುಟುಂಬವು ವಿವಾಹವನ್ನು ನಿಶ್ಚಯ ಮಾಡಿತ್ತು. ಆದರೆ, ಆಕೆ ಮದುವೆಗೆ ನಿರಾಕರಿಸಿದ್ದಳು. ಈ ಸಂಬಂಧ ಹಲವು ಬಾರಿ ಜಗಳ ಉಂಟಾಗಿತ್ತು. ಬಳಿಕ ಆಕೆ ಬೇರೆ ಧರ್ಮಕ್ಕೆ ಸೇರಿದ ಯುವಕನೊಂದಿಗೆ ಮನೆ ಬಿಟ್ಟು ಹೋಗಿದ್ದಾಳೆ.
ಹುಡುಗಿಯ ತಂದೆ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಕುಟುಂಬದ ನಿರ್ಧಾರಕ್ಕೆ ಬೆಂಬಲ ನೀಡಿದ್ದಾರೆ ಎಂದು ಬಿಸ್ವಾಸ್ ತಿಳಿಸಿದ್ದಾರೆ.
ಕುಟುಂಬಕ್ಕೆ ಹತ್ತಿರದ ಮೂಲಗಳ ಪ್ರಕಾರ, ಯುವತಿ ಜಿಲ್ಲೆಯ ಬೇರೆಡೆ ತನ್ನ ಅತ್ತೆ-ಮಾವನ ಜೊತೆ ಇದ್ದಾರೆ ಮತ್ತು ಮನಶ್ಶಾಸ್ತ್ರಜ್ಞರಿಂದ ಸಮಾಲೋಚನೆ ಪಡೆಯುತ್ತಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, 'ಘಟನೆ ಬಗ್ಗೆ ನಮಗೆ ತಿಳಿದುಬಂದಿದೆ. ಆದರೆ, ಅವರು ವಯಸ್ಕರಾಗಿರುವುದರಿಂದ ನಾವು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ'. ಈ ಸಂಬಂಧ ಯಾರೂ ದೂರು ದಾಖಲಿಸಿಲ್ಲ ಎಂದು ತಿಳಿಸಿದ್ದಾರೆ.
Advertisement