
ಪುಣೆ: ಈ ತಿಂಗಳ ಆರಂಭದಲ್ಲಿ ಅಹಮದಾಬಾದ್‌ನಲ್ಲಿ ಪತನಗೊಂಡ ಏರ್ ಇಂಡಿಯಾ ವಿಮಾನದ ಬ್ಲ್ಯಾಕ್ ಬಾಕ್ಸ್ ಅನ್ನು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಪರಿಶೀಲಿಸುತ್ತಿದೆ ಎಂದ ನಾಗರಿಕ ವಿಮಾನಯಾನ ಸಚಿವ ಕೆ ರಾಮಮೋಹನ್ ನಾಯ್ಡು ಮಂಗಳವಾರ ಹೇಳಿದ್ದು, ತನಿಖೆಗಾಗಿ ಅದನ್ನು ವಿದೇಶಕ್ಕೆ ಕಳುಹಿಸಲಾಗುವುದು ಎಂಬ ಊಹಾಪೋಹವನ್ನು ತಳ್ಳಿಹಾಕಿದರು.
ಜೂನ್ 12 ರಂದು ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಮೇಘಾನಿನಗರದ ಹಾಸ್ಟೆಲ್ ಸಂಕೀರ್ಣಕ್ಕೆ ಅಪ್ಪಳಿಸಿತು. ಇದರಲ್ಲಿ ವಿಮಾನದಲ್ಲಿದ್ದ 241 ಜನರು ಸೇರಿದಂತೆ 270 ಜನರು ಸಾವಿಗೀಡಾಗಿದ್ದರು. ಒಬ್ಬ ಪ್ರಯಾಣಿಕ ಮಾತ್ರ ಬದುಕುಳಿದರು.
ಜೂನ್ 13ರಂದು ಏರ್ ಇಂಡಿಯಾದ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನದ ಬ್ಲ್ಯಾಕ್ ಬಾಕ್ಸ್ ಅನ್ನು ವಿಮಾನ ಪತನಗೊಂಡ ಸ್ಥಳದಿಂದ ವಶಪಡಿಸಿಕೊಳ್ಳಲಾಯಿತು.
ಬ್ಲ್ಯಾಕ್ ಬಾಕ್ಸ್ ವಿಮಾನ ಹಾರಾಟದ ಸಮಯದಲ್ಲಿ ಅದರ ಬಗ್ಗೆ ಮಾಹಿತಿಯನ್ನು ದಾಖಲಿಸುವ ಒಂದು ಸಣ್ಣ ಸಾಧನವಾಗಿದೆ. ಇದು ವಾಯುಯಾನ ಅಪಘಾತಗಳ ತನಿಖೆಯಲ್ಲಿ ಸಹಾಯ ಮಾಡುತ್ತದೆ.
ಘಟನೆಯ ತನಿಖೆಗಾಗಿ ಬ್ಲ್ಯಾಕ್ ಬಾಕ್ಸ್ ಅನ್ನು ವಿದೇಶಕ್ಕೆ ಕಳುಹಿಸಲಾಗುವುದು ಎಂಬ ಕೆಲವು ಮಾಧ್ಯಮ ವರದಿಗಳ ಕುರಿತು ಕೇಳಿದಾಗ, 'ಇದೆಲ್ಲವೂ ಊಹಾಪೋಹ. ಬ್ಲ್ಯಾಕ್ ಬಾಕ್ಸ್ ಭಾರತದಲ್ಲಿದೆ ಮತ್ತು ಸದ್ಯ ಅದನ್ನು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ತನಿಖೆ ಮಾಡುತ್ತಿದೆ' ಎಂದು ಹೇಳಿದರು.
ಬ್ಲ್ಯಾಕ್ ಬಾಕ್ಸ್ ಡೇಟಾವನ್ನು ಯಾವಾಗ ಪಡೆಯಲಾಗುವುದು ಎಂಬ ಪ್ರಶ್ನೆಗೆ ಸಚಿವರು, 'ಇದು ಬಹಳ ತಾಂತ್ರಿಕ ವಿಷಯ. ಮೊದಲು AAIB ತನಿಖೆ ನಡೆಸಿ ಸಂಪೂರ್ಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿ' ಎಂದು ಹೇಳಿದರು.
FICCI ಮತ್ತು ನಾಗರಿಕ ವಿಮಾನಯಾನ ಸಚಿವಾಲಯ ಜಂಟಿಯಾಗಿ ಆಯೋಜಿಸಿದ್ದ ಹೆಲಿಕಾಪ್ಟರ್‌ಗಳು ಮತ್ತು ಸಣ್ಣ ವಿಮಾನ ಶೃಂಗಸಭೆ 2025ರ ಸಂದರ್ಭದಲ್ಲಿ ನಾಯ್ಡು ಇಲ್ಲಿ ಮಾತನಾಡುತ್ತಿದ್ದರು.
ಅಹಮದಾಬಾದ್ ವಿಮಾನ ಅಪಘಾತದ ಕಾರಣಗಳನ್ನು ತನಿಖೆ ಮಾಡಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದ್ದು, ತನಿಖೆ ಸುಗಮವಾಗಿ ನಡೆಯುತ್ತಿದೆ ಎಂದು ಘಟನೆಯ ನಂತರ ಸರ್ಕಾರ ತಿಳಿಸಿದೆ.
'ಬ್ಲ್ಯಾಕ್ ಬಾಕ್ಸ್ ಅನ್ನು ಡಿಕೋಡ್ ಮಾಡುವುದರಿಂದ ವಿಮಾನ ಅಪಘಾತಕ್ಕೆ ಕೆಲವೇ ಕ್ಷಣಗಳ ಮೊದಲು ಏನಾಯಿತು ಎಂಬುದರ ಕುರಿತು ಆಳವಾದ ಒಳನೋಟ ಸಿಗುತ್ತದೆ' ಎಂದು ನಾಯ್ಡು ಈ ಹಿಂದೆ ಹೇಳಿದ್ದರು.
Advertisement