
ನವದೆಹಲಿ: ಇಸ್ರೇಲ್ ಹಾಗೂ ಇರಾನ್ ನಡುವಣ ಕದನ ವಿರಾಮ ಒಪ್ಪಂದದಿಂದ ಸದ್ಯ ಉದ್ವಿಗ್ನ ಪರಿಸ್ಥಿತಿ ಶಮನಗೊಂಡಿದ್ದರೂ ಅಲ್ಲಿದ್ದ ಭಾರತೀಯ ಪ್ರಜೆಗಳು ತಾಯ್ನಾಡಿಗೆ ವಾಪಸ್ಸಾಗುತ್ತಿದ್ದಾರೆ.
'ಆಪರೇಷನ್ ಸಿಂಧು' ಕಾರ್ಯಾಚರಣೆಯಡಿ ಇಂದು 224 ಭಾರತೀಯ ಪ್ರಜೆಗಳು ಇಸ್ರೇಲ್ ನಿಂದ ನವದೆಹಲಿಗೆ ಆಗಮಿಸಿದರು. ಅವರನ್ನು ಪಾಲಂ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಸ್ವಾಗತಿಸಿದರು.
'ಆಪರೇಷನ್ ಸಿಂಧು' ಕಾರ್ಯಾಚರಣೆಯಡಿ ಇಲ್ಲಿಯವರೆಗೂ ಇಸ್ರೇಲ್ ನಿಂದ 818 ಭಾರತೀಯ ಪ್ರಜೆಗಳು ಭಾರತಕ್ಕೆ ಆಗಮಿಸಿದ್ದಾರೆ.
ಇಸ್ರೇಲ್ ಮತ್ತು ಇರಾನ್ ನಡುವಿನ ಇತ್ತೀಚಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಇಸ್ರೇಲ್ ನಿಂದ ಹೊರ ಹೋಗಲು ಬಯಸುವ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಭಾರತ ಸರ್ಕಾರ ನಿರ್ಧರಿಸಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಪ್ರಜೆ, ಸ್ವದೇಶಕ್ಕೆ ಮರಳಿರುವುದರಿಂದ ತುಂಬಾ ಸಂತಸವಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಇಸ್ರೇಲ್ ನಿಂದ 224 ಭಾರತೀಯ ನಾಗರಿಕರು ಇಂದು ಆಗಮಿಸಿದ್ದಾರೆ. ಇವರೆಲ್ಲರೂ ಜೋರ್ಡಾನ್ ಮತ್ತು ಈಜಿಪ್ಟ್ ಗಡಿಗಳನ್ನು ದಾಟಿ ಭಾರತೀಯ ವಾಯುಪಡೆ ವಿಮಾನದ ಮೂಲಕ ಆಗಮಿಸಿದ್ದಾರೆ. ನೇಪಾಳ ಮತ್ತು ಶ್ರೀಲಂಕಾದ ಜನರನ್ನು ಸಹ ಭಾರತ ಸರ್ಕಾರ ಸ್ಥಳಾಂತರಿಸಿದೆ ಎಂದು ತಿಳಿಸಿದರು
Advertisement