
ನವದೆಹಲಿ: ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿಕೆಯಾಗಿ 50 ವರ್ಷವಾದ ಸಂದರ್ಭದಲ್ಲಿ ಕರಾಳ ದಿನಗಳ ಬಗ್ಗೆ ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿರುವುದಕ್ಕೆ ಪ್ರತಿಕ್ರಿಯೆಯಾಗಿ ಕಾಂಗ್ರೆಸ್ ತಿರುಗೇಟು ಕೊಟ್ಟಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ಟೀಕೆ ಮಾಡಿರುವ ಕಾಂಗ್ರೆಸ್, ಕಳೆದ ಹನ್ನೊಂದು ವರ್ಷಗಳಿಂದ ಭಾರತೀಯ ಪ್ರಜಾಪ್ರಭುತ್ವದ ಮೇಲೆ ಆಡಳಿತವು ನಿರಂತರ ಮತ್ತು ಅಪಾಯಕಾರಿ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದೆ. ಕಳೆದೊಂದು ದಶಕವನ್ನು ''ಅಘೋಷಿತ ತುರ್ತು ಪರಿಸ್ಥಿತಿ@11" ಎಂದು ಕರೆದಿದೆ.
ಪ್ರಸ್ತುತ ಸರ್ಕಾರದ ಆಡಳಿತದಲ್ಲಿ ನಾಗರಿಕ ಸ್ವಾತಂತ್ರ್ಯಗಳನ್ನು ಮೊಟಕುಗೊಳಿಸಲಾಗಿದೆ. ದ್ವೇಷ ಭಾಷಣಗಳು ವ್ಯಾಪಕವಾಗಿ ಹರಡಿವೆ ಎಂದು ಕಾಂಗ್ರೆಸ್ ಟೀಕಿಸಿದೆ.
ಕಾಂಗ್ರೆಸ್ ಸಂವಹನ ವಿಭಾಗದ ಉಸ್ತುವಾರಿ ವಹಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಇಂದು ಅಧಿಕಾರದಲ್ಲಿರುವವರು ದ್ವೇಷ ಮತ್ತು ಧರ್ಮಾಂಧತೆಯನ್ನು ಸಕ್ರಿಯವಾಗಿ ಪ್ರಚಾರ ಮಾಡುತ್ತಿದ್ದಾರೆ. ಶಾಂತಿಯುತ ಪ್ರತಿಭಟನೆಗಳನ್ನು ದೂಷಣೆಗೆ ಒಳಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಪ್ರತಿಭಟನಾ ನಿರತ ರೈತರನ್ನು "ಖಲಿಸ್ತಾನಿಗಳು" ಎಂದು ಬ್ರಾಂಡ್ ಮಾಡಲಾಗಿದೆ, ಜಾತಿ ಜನಗಣತಿಯ ಬೆಂಬಲಿಗರನ್ನು "ನಗರ ನಕ್ಸಲರು" ಎಂದು ಬಿಂಬಿಸಲಾಗುತ್ತಿದೆ ಎಂದಿದ್ದಾರೆ.
ಮಹಾತ್ಮ ಗಾಂಧಿಯವರ ಹಂತಕರನ್ನು ವೈಭವೀಕರಿಸುವ ವ್ಯಕ್ತಿಗಳನ್ನೇ ಎತ್ತಿ ಸಂಭ್ರಮಿಸಲಾಗುತ್ತಿದೆ. ಅಲ್ಪಸಂಖ್ಯಾತ ಸಮುದಾಯಗಳು ತಮ್ಮ ಸುರಕ್ಷತೆ ಮತ್ತು ಆಸ್ತಿಗಾಗಿ ಭಯದಲ್ಲಿ ಬದುಕುತ್ತಿವೆ. ಸಮಾಜದಲ್ಲಿ ನಿರ್ಗತಿಕ ಅಂಚಿನಲ್ಲಿರುವ ಗುಂಪುಗಳು, ವಿಶೇಷವಾಗಿ ದಲಿತರನ್ನು ಅಸಮಾನವಾಗಿ ಗುರಿಯಾಗಿಸಲಾಗುತ್ತಿದೆ. ಆಘಾತಕಾರಿಯಾಗಿ, ದ್ವೇಷ ತುಂಬಿದ ಹೇಳಿಕೆಗಳನ್ನು ನೀಡುವ ಸಚಿವರಿಗೆ ಬಡ್ತಿಗಳನ್ನು ನೀಡಲಾಗುತ್ತಿದೆ ಎಂದು ಜೈರಾಂ ರಮೇಶ್ ಟೀಕಿಸಿದ್ದಾರೆ.
1975ರಲ್ಲಿ ಆಗಿನ ಇಂದಿರಾ ಗಾಂಧಿ ಸರ್ಕಾರ ತುರ್ತು ಪರಿಸ್ಥಿತಿ ಹೇರಿದ ವಾರ್ಷಿಕೋತ್ಸವದಂದು ಸರ್ಕಾರ 'ಸಂವಿಧಾನ ಹತ್ಯೆ ದಿವಸ' ಆಚರಿಸುತ್ತಿರುವ ದಿನದಂದು ಅವರ ಹೇಳಿಕೆಗಳು ಬಂದಿವೆ.
ಇದು ತುರ್ತು ಪರಿಸ್ಥಿತಿ ಹೇರಿದ 50 ನೇ ವರ್ಷಾಚರಣೆ
ಕಳೆದ ಹನ್ನೊಂದು ವರ್ಷ ಮೂವತ್ತು ದಿನಗಳಲ್ಲಿ, ಭಾರತೀಯ ಪ್ರಜಾಪ್ರಭುತ್ವವು ವ್ಯವಸ್ಥಿತ ಮತ್ತು ಅಪಾಯಕಾರಿ ಐದು ಪಟ್ಟು ದಾಳಿಗೆ ಒಳಗಾಗಿದೆ, ಇದನ್ನು ಅಘೋಷಿತ ತುರ್ತು ಪರಿಸ್ಥಿತಿ@11 ಎಂದು ವಿವರಿಸಬಹುದು" ಎಂದು ಹೇಳಿದ್ದಾರೆ.
ಸಂವಿಧಾನದ ಮೇಲಿನ ದಾಳಿಗಳು, ತೆರಿಗೆ ಭಯೋತ್ಪಾದನೆ ಮತ್ತು ವ್ಯವಹಾರಗಳು ಮತ್ತು ಸಂಸ್ಥೆಗಳ ಮೇಲಿನ ಬೆದರಿಕೆ, ಮಾಧ್ಯಮಗಳ ಮೇಲಿನ ನಿಯಂತ್ರಣ ಮತ್ತು ತನಿಖಾ ಸಂಸ್ಥೆಗಳ ದುರುಪಯೋಗವನ್ನು ಉಲ್ಲೇಖಿಸಿ ಅವರು "ಅಘೋಷಿತ ತುರ್ತು ಪರಿಸ್ಥಿತಿ" ಜಾರಿಯಲ್ಲಿದೆ ಎಂದು ಪ್ರತಿಪಾದಿಸಿದ್ದಾರೆ.
Advertisement