
ನವದೆಹಲಿ: ದೇಶದಲ್ಲಿ 50 ವರ್ಷಗಳ ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಘೋಷಣೆ ಮಾಡಿದ್ದ ತುರ್ತು ಪರಿಸ್ಥಿತಿಯನ್ನು ಖಂಡಿಸಿ ಕೇಂದ್ರ ಸಚಿವ ಸಂಪುಟ ಬುಧವಾರ ನಿರ್ಣಯ ಅಂಗೀಕರಿಸಿದೆ ಮತ್ತು ಸಂವಿಧಾನಾತ್ಮಕವಾಗಿ ಖಾತರಿಪಡಿಸಿದ ಪ್ರಜಾಪ್ರಭುತ್ವ ಹಕ್ಕುಗಳನ್ನು ಕಳೆದುಕೊಂಡ ಮತ್ತು ನಂತರ "ಊಹಿಸಲಾಗದ ಭಯಾನಕತೆಗಳಿಗೆ" ಒಳಗಾದವರಿಗೆ ಗೌರವ ಸಲ್ಲಿಸಲು ಎರಡು ನಿಮಿಷ ಮೌನ ಆಚರಿಸಲಾಯಿತು.
ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ನಿರ್ಣಯವನ್ನು ಓದಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್, "ತುರ್ತು ಪರಿಸ್ಥಿತಿಯ ಅತಿರೇಕಗಳಿಗೆ ಖಂಡನೆ ವ್ಯಕ್ತಪಡಿಸುವ ನಿರ್ಣಯವನ್ನು ಕೇಂದ್ರ ಸಚಿವ ಸಂಪುಟ ಸಭೆ ಅಂಗೀಕರಿಸಿತು" ಎಂದು ಹೇಳಿದರು.
ಆಗಿನ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರ ಜೂನ್ 25, 1975 ರಂದು ತುರ್ತು ಪರಿಸ್ಥಿತಿಯನ್ನು ಘೋಷಿಸಿತ್ತು. ಕಳೆದ ವರ್ಷ, ಮೋದಿ ಸರ್ಕಾರ ಈ ದಿನವನ್ನು 'ಸಂವಿಧಾನ ಹತ್ಯೆ ದಿವಸ್' ಎಂದು ಆಚರಿಸುವುದಾಗಿ ಘೋಷಿಸಿತು.
ಭಾರತೀಯ ಸಂವಿಧಾನದ ಚೈತನ್ಯವನ್ನು ಬುಡಮೇಲು ಮಾಡುವ ತುರ್ತು ಪರಿಸ್ಥಿತಿಯ ವಿರುದ್ಧ ಧೈರ್ಯದಿಂದ ಹೋರಾಡಿದ ಅಸಂಖ್ಯಾತ ವ್ಯಕ್ತಿಗಳ ತ್ಯಾಗಗಳನ್ನು ಸ್ಮರಿಸಲು ಮತ್ತು ಗೌರವಿಸಲು ಕೇಂದ್ರ ಸಚಿವ ಸಂಪುಟ ಸಭೆ ನಿರ್ಧರಿಸಿತು.
"2025ನೇ ವರ್ಷವು ಸಂವಿಧಾನ ಹತ್ಯೆ ದಿವಸಕ್ಕೆ 50 ವರ್ಷವಾಗಿರುವುದನ್ನು ಸೂಚಿಸುತ್ತದೆ - ಭಾರತದ ಇತಿಹಾಸದಲ್ಲಿ ಸಂವಿಧಾನವನ್ನು ಬುಡಮೇಲುಗೊಳಿಸಿದ, ಭಾರತದ ಗಣರಾಜ್ಯ ಮತ್ತು ಪ್ರಜಾಪ್ರಭುತ್ವ ಮನೋಭಾವದ ಮೇಲೆ ದಾಳಿ ಮಾಡಿದ, ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸಿದ ಮತ್ತು ಮೂಲಭೂತ ಹಕ್ಕುಗಳು, ವ್ಯಕ್ತಿ ಸ್ವಾತಂತ್ರ್ಯ ಮತ್ತು ಘನತೆಯನ್ನು ಕಿತ್ತುಕೊಂಡ ಮರೆಯಲಾಗದ ಕರಾಳ ಅಧ್ಯಾಯ" ಎಂದು ನಿರ್ಣಯ ಹೇಳುತ್ತದೆ.
ಭಾರತದ ಜನರು ಭಾರತೀಯ ಸಂವಿಧಾನ ಮತ್ತು ದೇಶದ ಪ್ರಜಾಪ್ರಭುತ್ವ ನೀತಿಯ ಸ್ಥಿತಿಸ್ಥಾಪಕತ್ವದಲ್ಲಿ ಅಚಲ ನಂಬಿಕೆ ಹೊಂದಿದ್ದಾರೆ ಎಂದು ಕೇಂದ್ರ ಸಚಿವ ಸಂಪುಟ ಪುನರುಚ್ಚರಿಸಿದೆ.
"ಸರ್ವಾಧಿಕಾರಿ ಪ್ರವೃತ್ತಿಗಳನ್ನು ವಿರೋಧಿಸಿದ ಮತ್ತು ನಮ್ಮ ಸಂವಿಧಾನ ಹಾಗೂ ಅದರ ಪ್ರಜಾಪ್ರಭುತ್ವದ ರಚನೆಯನ್ನು ರಕ್ಷಿಸಲು ದೃಢವಾಗಿ ನಿಂತವರಿಂದ ಸ್ಫೂರ್ತಿ ಪಡೆಯುವುದು ಯುವಕರಿಗೆ ಎಷ್ಟು ಮುಖ್ಯವೋ, ವೃದ್ಧರಿಗೆ ಅಷ್ಟೇ ಮುಖ್ಯ" ಎಂದು ನಿರ್ಣಯ ಹೇಳಿದೆ.
Advertisement