
ಶ್ರೀನಗರ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಈ ವರ್ಷದ ಅಮರನಾಥ ಯಾತ್ರೆಗೆ ಯಾತ್ರಿಕರ ನೋಂದಣಿಯಲ್ಲಿ ಶೇಕಡಾ 10ಕ್ಕೂ ಹೆಚ್ಚು ಇಳಿಕೆ ಕಂಡುಬಂದಿದೆ ಎಂದು ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಗುರುವಾರ ಹೇಳಿದ್ದಾರೆ.
"ಏಪ್ರಿಲ್ 22 ರ ದಾಳಿಗೂ ಮೊದಲು ಯಾತ್ರಿಕರ ನೋಂದಣಿ ಉತ್ತಮ ವೇಗದಲ್ಲಿ ನಡೆಯುತ್ತಿತ್ತು. ಆದರೆ ದಾಳಿ ನಂತರ ನೋಂದಣಿ ಕಡಿಮೆಯಾಯಿತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನೋಂದಣಿಯಲ್ಲಿ ಶೇಕಡಾ 10.19 ರಷ್ಟು ಕುಸಿತ ಕಂಡುಬಂದಿದೆ" ಎಂದು ಸಿನ್ಹಾ ಶ್ರೀನಗರದ ರಾಜಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪಹಲ್ಗಾಮ್ ಪ್ರದೇಶದ ಬೈಸರನ್‌ನಲ್ಲಿ ಉಗ್ರ ದಾಳಿ ನಡೆಯುವ ಮೊದಲು ಸುಮಾರು 2.36 ಲಕ್ಷ ಯಾತ್ರಿಕರು ಅಮರನಾಥ ಯಾತ್ರೆಗೆ ನೋಂದಾಯಿಸಿಕೊಂಡಿದ್ದರು ಎಂದು ಲೆಫ್ಟಿನೆಂಟ್ ಗವರ್ನರ್ ಹೇಳಿದ್ದಾರೆ.
"ಜಮ್ಮು ಮತ್ತು ಕಾಶ್ಮೀರ ಆಡಳಿತ ಮತ್ತು ಭದ್ರತಾ ಪಡೆಗಳು ತೆಗೆದುಕೊಂಡ ಕ್ರಮಗಳಿಂದಾಗಿ ಯಾತ್ರಿಕರಲ್ಲಿ ವಿಶ್ವಾಸ ಮರಳುತ್ತಿದೆ. ಇದು ನೋಂದಣಿ ಮತ್ತೆ ಹೆಚ್ಚಾಗಲು ಕಾರಣವಾಗಿದೆ" ಎಂದು ಅವರು ತಿಳಿಸಿದರು.
ಏಪ್ರಿಲ್ 22 ರ ಮೊದಲು ಯಾತ್ರೆಗೆ ನೋಂದಾಯಿಸಿಕೊಂಡಿದ್ದ ಯಾತ್ರಿಕರ ಮರುಪರಿಶೀಲನೆ ಪ್ರಕ್ರಿಯೆಯನ್ನು ಅಮರನಾಥ ದೇವಾಲಯ ಮಂಡಳಿ(SASB) ಪ್ರಾರಂಭಿಸಿದೆ ಎಂದು ಸಿನ್ಹಾ ಹೇಳಿದರು.
"ಇಲ್ಲಿಯವರೆಗೆ, 85000 ಯಾತ್ರಿಕರು ತಮ್ಮ ನೋಂದಣಿಯನ್ನು ಮರು ದೃಢೀಕರಿಸಿದ್ದಾರೆ ಮತ್ತು ಮುಂಬರುವ ದಿನಗಳಲ್ಲಿ ನೋಂದಣಿ ಹೆಚ್ಚಾಗುತ್ತದೆ ಎಂದು ನಾವು ಭಾವಿಸುತ್ತೇವೆ" ಎಂದು ಅವರು ಹೇಳಿದ್ದಾರೆ.
ಈ ವರ್ಷದ ಭಯೋತ್ಪಾದಕ ದಾಳಿಯು ಅಮರನಾಥ ಯಾತ್ರೆ ಮೇಲೆ ಪರಿಣಾಮ ಬೀರಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿನ್ಹಾ, ಇಡೀ ಜಮ್ಮು ಮತ್ತು ಕಾಶ್ಮೀರದ ಮೇಲೆ, ವಿಶೇಷವಾಗಿ ಕಣಿವೆಯ ಮೇಲೆ ಪರಿಣಾಮ ಬೀರಿದೆ ಎಂದು ತಿಳಿಸಿದ್ದಾರೆ.
ಜುಲೈ 3 ರಿಂದ ಪ್ರಾರಂಭವಾಗಿ ಆಗಸ್ಟ್ 9 ರಂದು ಕೊನೆಗೊಳ್ಳುವ ಅಮರನಾಥ ಯಾತ್ರೆಗೆ ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಲೆಫ್ಟಿನೆಂಟ್ ಗವರ್ನರ್ ಹೇಳಿದ್ದಾರೆ.
Advertisement