
ನವದೆಹಲಿ: ನೋಯ್ಡಾದಲ್ಲಿ "ಅಕ್ರಮ"ವಾಗಿ ನಡೆಸಲಾಗುತ್ತಿದ್ದ ವೃದ್ಧಾಶ್ರಮದ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಕೆಲವು ಮಹಿಳೆಯರನ್ನು ಕಟ್ಟಿಹಾಕಿರುವುದು ಪತ್ತೆಯಾಗಿದೆ. ಅನೇಕ ನಿವಾಸಿಗಳು ಬಟ್ಟೆಯಿಲ್ಲದೆ ಇರುವುದು ಮತ್ತು ಇತರರು "ನೆಲಮಾಳಿಗೆಯಂತಹ" ಕೊಠಡಿಗಳಲ್ಲಿ ಇರುವುದು ಕಂಡುಬಂದ ನಂತರ ನಲವತ್ತೆರಡು ವೃದ್ಧರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶ ರಾಜ್ಯ ಮಹಿಳಾ ಆಯೋಗ ಮತ್ತು ರಾಜ್ಯ ಕಲ್ಯಾಣ ಇಲಾಖೆಯ ಸದಸ್ಯರ ಸಮ್ಮುಖದಲ್ಲಿ ಗುರುವಾರ ನಡೆಸಿದ ದಾಳಿಯ ಸಮಯದಲ್ಲಿ, ವೃದ್ಧಾಶ್ರಮವು ಶೋಚನೀಯ ಸ್ಥಿತಿಯಲ್ಲಿರುವುದು ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.
ನೋಯ್ಡಾದ ಸೆಕ್ಟರ್ 55 ರ ಸಿ -5 ನಲ್ಲಿರುವ ಆನಂದ್ ನಿಕೇತನ ವೃದ್ಧ ಸೇವಾ ಆಶ್ರಮ ಒಂದು ಅಕ್ರಮ ವೃದ್ಧಾಶ್ರಮವಾಗಿದೆ ಎಂದು ಮಹಿಳಾ ಆಯೋಗದ ಸದಸ್ಯೆ ಮೀನಾಕ್ಷಿ ಭರಾಲಾ ಹೇಳಿದ್ದಾರೆ.
"ದಾಳಿಯ ಸಮಯದಲ್ಲಿ, ಒಬ್ಬ ವೃದ್ಧ ಮಹಿಳೆಯನ್ನು ಕಟ್ಟಿಹಾಕಿ ಹಿಂಸೆ ನೀಡಲಾಗಿದ್ದು, ಇತರ ವೃದ್ಧರನ್ನು ನೆಲಮಾಳಿಗೆಯಂತಹ ಕೊಠಡಿಗಳಲ್ಲಿ ಲಾಕ್ ಮಾಡಲಾಗಿತ್ತು" ಎಂದು ಅವರು ತಿಳಿಸಿದ್ದಾರೆ.
ಕೆಲವು ಪುರುಷರ ಬಟ್ಟೆ ಕೂಡ ಧರಿಸಿರಲಿಲ್ಲ. ಆದರೆ ಅನೇಕ ವೃದ್ಧ ಮಹಿಳೆಯರು ಅರ್ಧ ಬಟ್ಟೆ ಧರಿಸಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ ಎಂದು ಭರಾಲಾ ಹೇಳಿದ್ದಾರೆ.
"ಈ ವೃದ್ಧಾಶ್ರಮವು ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ. ಆಶ್ರಮದಲ್ಲಿ 42 ವೃದ್ಧರು ವಾಸಿಸುತ್ತಿದ್ದರು. ಅವರಲ್ಲಿ ಮೂವರು ವೃದ್ಧರನ್ನು ಶುಕ್ರವಾರ ಸಮಾಜ ಕಲ್ಯಾಣ ಇಲಾಖೆ ನಡೆಸುತ್ತಿರುವ ವೃದ್ಧಾಶ್ರಮಕ್ಕೆ ಸ್ಥಳಾಂತರಿಸಲಾಗುವುದು ಮತ್ತು ಉಳಿದವರನ್ನು ಮುಂದಿನ ಐದು ದಿನಗಳಲ್ಲಿ ಸರ್ಕಾರಿ ಅನುಮೋದಿತ ವೃದ್ಧಾಶ್ರಮಗಳಿಗೆ ಸ್ಥಳಾಂತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
Advertisement