
ಕೋಝಿಕೋಡ್: ರಾಜಭವನದಲ್ಲಿ ಅಧಿಕೃತ ಕಾರ್ಯಕ್ರಮ ಸಂದರ್ಭದಲ್ಲಿ ಭಾರತ ಮಾತೆಯ ಭಾವಚಿತ್ರವನ್ನು ಪ್ರದರ್ಶಿಸಿದ್ದಕ್ಕಾಗಿ ಕೇರಳದ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಅವರು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಕೃತ್ಯವು ಸಾಂವಿಧಾನಿಕ ಮಾನದಂಡಗಳ ಸ್ಪಷ್ಟ ಉಲ್ಲಂಘನೆ ಎಂದು ಆರೋಪಿಸಿದ್ದಾರೆ.
ಕೇಸರಿ ಧ್ವಜವನ್ನು ಹಿಡಿದ ಮಹಿಳೆಯನ್ನು ಚಿತ್ರಿಸುವ ಭಾವಚಿತ್ರವು ಧಾರ್ಮಿಕತೆಯನ್ನು ಸೂಚಿಸುತ್ತದೆ ಎಂದು ಸಹ ಸಚಿವರು ಹೇಳಿದ್ದಾರೆ.
ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ವ್ಯಕ್ತಿಯೊಬ್ಬರು ಅಧಿಕೃತ ಕಾರ್ಯಕ್ರಮ ಸಂದರ್ಭದಲ್ಲಿ ಇಂತಹ ಭಾವಚಿತ್ರಗಳನ್ನು ಪ್ರದರ್ಶಿಸುವುದು ಸಂವಿಧಾನದ ಮೂಲ ತತ್ವಗಳನ್ನು ಬುಡಮೇಲು ಮಾಡಿದಂತೆ ಎಂದು ಅವರು ಕೋಝಿಕ್ಕೋಡ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.
ರಾಜಭವನ ಸಮಾರಂಭಗಳಲ್ಲಿ ಭಾರತ ಮಾತೆಯ ಭಾವಚಿತ್ರವನ್ನು ಪ್ರದರ್ಶಿಸುವ ನಿರ್ಧಾರದ ವಿರುದ್ಧ ಕೇರಳದಲ್ಲಿ ತೀವ್ರ ವಾಗ್ಯುದ್ಧ ಮತ್ತು ಬೀದಿ ಪ್ರತಿಭಟನೆಗಳು ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಶಿವನ್‌ಕುಟ್ಟಿ ಅವರ ಹೇಳಿಕೆ ಬಂದಿದೆ.
ದೇಶದ ಸಂವಿಧಾನ ಪೀಠಿಕೆಯು ಭಾರತವನ್ನು ಜಾತ್ಯತೀತ ಪ್ರಜಾಪ್ರಭುತ್ವ ಗಣರಾಜ್ಯವೆಂದು ಘೋಷಿಸುತ್ತದೆ. ಸಂವಿಧಾನದ ವಿವಿಧ ವಿಧಿಗಳಲ್ಲಿ, ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವವರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಯಾವುದೇ ಧಾರ್ಮಿಕ ಆಚರಣೆಯನ್ನು ಉತ್ತೇಜಿಸುವುದನ್ನು ನಿಷೇಧಿಸಲಾಗಿದೆ.
ಆದ್ದರಿಂದ, ರಾಜ್ಯಪಾಲರ ಈ ಕ್ರಮವು ಭಾರತೀಯ ಸಂವಿಧಾನದ ಜಾತ್ಯತೀತ ಸ್ವರೂಪದ ಮೇಲಿನ ಸ್ಪಷ್ಟ ದಾಳಿಯಾಗಿದೆ. ಇದು ಶಿಷ್ಟಾಚಾರದ ಉಲ್ಲಂಘನೆ ಮಾತ್ರವಲ್ಲ, ಸಂವಿಧಾನವು ಖಾತರಿಪಡಿಸಿದ ಜಾತ್ಯತೀತ ಮೌಲ್ಯಗಳನ್ನು ದುರ್ಬಲಗೊಳಿಸುವ ಕೃತ್ಯವೂ ಆಗಿದೆ ಎಂದು ಶಿವನ್‌ಕುಟ್ಟಿ ಹೇಳಿದರು.
ಭಾವಚಿತ್ರದ ಪ್ರದರ್ಶನ ಮಾಡಿದ್ದಕ್ಕೆ ರಾಜಭವನದಲ್ಲಿ ನಡೆದ ಅಧಿಕೃತ ಕಾರ್ಯಕ್ರಮವನ್ನು ಬಹಿಷ್ಕರಿಸಿದ ನಿರ್ಧಾರವನ್ನು ಸಚಿವರು ಸಮರ್ಥಿಸಿಕೊಂಡರು.
Advertisement