
ಖೈಬರ್ ಪಖ್ತುಂಖ್ವಾದ ವಜೀರಿಸ್ತಾನ್ ಪ್ರದೇಶದಲ್ಲಿ ನಡೆದ ಮಾರಕ ಆತ್ಮಹತ್ಯಾ ಬಾಂಬ್ ದಾಳಿಗೆ ಸಂಬಂಧ ಕಲ್ಪಿಸುವ ಪಾಕಿಸ್ತಾನ ಪ್ರಯತ್ನವನ್ನು ಭಾರತ ಬಲವಾಗಿ ತಿರಸ್ಕರಿಸಿದೆ, ಪಾಕಿಸ್ತಾನದ ಆರೋಪಗಳು ಆಧಾರರಹಿತವಾಗಿವೆ ಎಂದು ಹೇಳಿದೆ.
ನಿನ್ನೆ ನಡೆದ ಈ ದಾಳಿಯಲ್ಲಿ ಕನಿಷ್ಠ 13 ಭದ್ರತಾ ಸಿಬ್ಬಂದಿ ಮೃತಪಟ್ಟು 24 ಜನರು ಗಾಯಗೊಂಡರು. ಪಾಕಿಸ್ತಾನ ಸೇನೆಯು ಈ ದಾಳಿಯಲ್ಲಿ ಭಾರತ ಭಾಗಿಯಾಗಿದೆ ಎಂದು ಹೇಳಿಕೆ ಬಿಡುಗಡೆ ಮಾಡಿದೆ.
ಇದಕ್ಕೆ ಸರಿಯಾದ ತಿರುಗೇಟು ನೀಡಿರುವ ಭಾರತ ವಿದೇಶಾಂಗ ಸಚಿವಾಲಯ (MEA) ಆರೋಪಗಳನ್ನು ಖಂಡಿಸಿತು. ವಜೀರಿಸ್ತಾನ್ ದಾಳಿಯ ಜವಾಬ್ದಾರಿಯನ್ನು ಭಾರತಕ್ಕೆ ಹೊರಿಸಿ ಪಾಕಿಸ್ತಾನ ಸೇನೆಯ ಅಧಿಕೃತ ಹೇಳಿಕೆಯನ್ನು ನಾವು ನೋಡಿದ್ದೇವೆ. ನಾವು ಈ ಹೇಳಿಕೆಯನ್ನು ತಿರಸ್ಕರಿಸುತ್ತೇವೆ ಎಂದು ವಿದೇಶಾಂಗ ಸಚಿವಾಲಯ ವಕ್ತಾರರು ತಿಳಿಸಿದ್ದಾರೆ.
ಪಾಕಿಸ್ತಾನವು ಆಪಾದನೆಯನ್ನು ಭಾರತದ ಮೇಲೆ ಹೊರಿಸುವ ಬದಲು ತನ್ನದೇ ಗಡಿಯೊಳಗಿನ ಭಯೋತ್ಪಾದನೆಯನ್ನು ನಿಭಾಯಿಸುವತ್ತ ಗಮನಹರಿಸಬೇಕು ಎಂದು ಭಾರತ ಪುನರುಚ್ಚರಿಸಿದೆ.
Advertisement