
ಪುಣೆ: ಮುಸ್ಲಿಂರು ವಾಸಿಸುವ ಮೊಹಲ್ಲಾಗಳಲ್ಲಿ ಭಗವದ್ಗೀತೆ ಪ್ರಚಾರದಿಂದ ಹಿಂದೂ ರಾಷ್ಟ್ರದ ಕಲ್ಪನೆ ಸಾಕಾರಗೊಳ್ಳಲಿದೆ ಎಂದು ಮಹಾರಾಷ್ಟ್ರದ ಸಚಿವ ನಿತೇಶ್ ರಾಣೆ ಭಾನುವಾರ ಹೇಳಿದ್ದಾರೆ.
ಭಗವದ್ಗೀತೆ ಎಂದಿಗೂ ದ್ವೇಷವನ್ನು ಅಥವಾ (ಧಾರ್ಮಿಕ) ಮತಾಂತರಗಳನ್ನು ಬೋಧಿಸುವುದಿಲ್ಲ. ಅದರ ಬೋಧನೆಗಳು ಮೊಹಲ್ಲಾಗಳಿಗೆ ಹರಡಿದರೆ, ಅವರ ಆಲೋಚನೆಗಳು ಸಹ ರೂಪಾಂತರಗೊಳ್ಳುತ್ತವೆ. ಇದು ನಮ್ಮ ಹಿಂದೂ ರಾಷ್ಟ್ರವನ್ನು ಬಲಪಡಿಸುತ್ತದೆ ಎಂದಿದ್ದಾರೆ.
ಭಗವದ್ಗೀತೆಯ ಬೋಧನೆಗಳು ಸಾಮರಸ್ಯ ಮತ್ತು ಚಿಂತನೆಗೆ ಹಚ್ಚುತ್ತವೆ. ಅದರ ಸಂದೇಶ ಮೂಲೆ ಮೂಲೆಗೂ ತಲುಪಬೇಕು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಶಾಲಾ ಪಠ್ಯಕ್ರಮದಲ್ಲಿ 1 ನೇ ತರಗತಿಯಿಂದ ಹಿಂದಿ ಸೇರ್ಪಡೆ ಕುರಿತ ವಿವಾದ ಮತ್ತು ವಿರೋಧ ಪಕ್ಷದ ಪ್ರತಿಭಟನೆ ನಡುವೆ"ಯಾವುದೇ ಭಾಷೆಯನ್ನು ಕಡ್ಡಾಯಗೊಳಿಸಲಾಗಿಲ್ಲ. ವಿದ್ಯಾರ್ಥಿಗಳು ಬಯಸಿದಲ್ಲಿ ಸಂಸ್ಕೃತವನ್ನು ಮೂರನೇ ಭಾಷೆಯಾಗಿ ಆರಿಸಿಕೊಳ್ಳಬಹುದು. ಗೀತೆ ರಚನೆಕಾರ ಜಾವೇದ್ ಅಖ್ತರ್, ನಟ ಅಮೀರ್ ಖಾನ್ ಅಥವಾ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮರಾಠಿ ಭಾಷೆಯಲ್ಲಿ ಮಾತನಾಡುವುದನ್ನು ನಾನು ಕೇಳಿಲ್ಲ ಎಂದರು.
ಶಾಲೆಗಳಲ್ಲಿ ಹಿಂದಿ ಹೇರಿಕೆ ವಿರುದ್ಧ ಜುಲೈ 5 ರಂದು ಶಿವಸೇನೆ (ಯುಬಿಟಿ) ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಜಂಟಿಯಾಗಿ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಘೋಷಿಸಿವೆ. ಬೆಹ್ರಂಪಾಡಾ ಅಥವಾ ಮೊಹಮ್ಮದ್ ಅಲಿ ರಸ್ತೆಯಂತಹ ಪ್ರದೇಶಗಳಲ್ಲಿ ಯಾಕೆ Rally ನಡೆಸಬಾರದು? ಇವು ಹಿಂದಿ ಮಾತನಾಡುವ ಸ್ಥಳಗಳಾಗಿವೆ. ಮರಾಠಿಯಲ್ಲಿ 'ಆಜಾನ್' ನೀಡುವ ದಿನ, ಭಾಷೆಯ ಬಗ್ಗೆ ನಿಜವಾದ ಗೌರವವಿದೆ ಎಂದು ನಾವು ತಿಳಿಯುತ್ತೇವೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಹಿಂದೂಗಳ ನಡುವೆ ಒಡಕು ಹೆಚ್ಚಿಸುವ ಬದಲು, ಮುಂಬೈನಲ್ಲಿ ದಶಕಗಳಿಂದ ವಾಸಿಸುತ್ತಿರುವ ಆದರೆ ಭಾಷೆಯನ್ನು ಸ್ವೀಕರಿಸದವರಿಗೆ ಮರಾಠಿ ಕಲಿಸಲು ಪ್ರಯತ್ನಿಸಬೇಕು ಎಂದು ರಾಣೆ ಸಲಹೆ ನೀಡಿದರು.
Advertisement