
ನವದೆಹಲಿ: ಆಂಧ್ರಪ್ರದೇಶದ ಶ್ರೀಶೈಲಂ ದೇವಸ್ಥಾನದಲ್ಲಿ ಭಾನುವಾರ ನೀಡಿದ ಲಡ್ಡು 'ಪ್ರಸಾದ'ದಲ್ಲಿ ಜಿರಳೆ ಸಿಕ್ಕಿದೆ ಎಂದು ಭಕ್ತರೊಬ್ಬರು ಹೇಳಿಕೊಂಡಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸರಶ್ಚಂದ್ರ ಕೆ ಎಂಬುವವರು ಲಡ್ಡು ಮಧ್ಯದಲ್ಲಿ ಸತ್ತ ಕೀಟ ಇರುವುದನ್ನು ತೋರಿಸುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಜಿರಳೆ ಪತ್ತೆಯಾದ ಕೂಡಲೇ ಸರಶ್ಚಂದ್ರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ನೀಡಿದ್ದು, ನಿರ್ಲಕ್ಷ್ಯದಿಂದ ದೇವಸ್ಥಾನದ ಸಿಬ್ಬಂದಿ ಲಡ್ಡುಗಳನ್ನು ತಯಾರಿಸಿದ್ದಾರೆ ಎಂದಿದ್ದಾರೆ.
'ಜೂನ್ 29 ರಂದು, ನಾನು ಶ್ರೀಶೈಲಂ ದೇವಸ್ಥಾನಕ್ಕೆ ಭೇಟಿ ನೀಡಿದ್ದಾಗ, ಲಡ್ಡು 'ಪ್ರಸಾದ'ದಲ್ಲಿ ಜಿರಳೆ ಕಂಡುಬಂದಿದೆ. ದೇವಸ್ಥಾನದ ಸಿಬ್ಬಂದಿ 'ಪ್ರಸಾದ' ತಯಾರಿಸುವಾಗ ನಿರ್ಲಕ್ಷ್ಯ ವಹಿಸಿದ್ದಾರೆ. ದಯವಿಟ್ಟು ಗಮನಿಸಿ ಸಮಸ್ಯೆಯನ್ನು ಬಗೆಹರಿಸಿ' ಎಂದು ಅವರು ಹೇಳಿದ್ದಾರೆ.
ಆದರೆ, ದೇವಸ್ಥಾನದ ಅಧಿಕಾರಿಯೊಬ್ಬರು ಸರಶ್ಚಂದ್ರ ಅವರ ಹೇಳಿಕೆಯನ್ನು ನಿರಾಕರಿಸಿದ್ದಾರೆ.
ಶ್ರೀಶೈಲಂ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ ರಾವ್ ಅವರ ಪ್ರಕಾರ, ತಾವು ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಂಡು ಲಡ್ಡುಗಳನ್ನು ತಯಾರಿಸುತ್ತೇವೆ. ಲಡ್ಡುಗಳನ್ನು ತಯಾರಿ ಕೇಂದ್ರದ ಸಿಬ್ಬಂದಿಯ ನಿರಂತರ ಮೇಲ್ವಿಚಾರಣೆಯಲ್ಲಿ ತಯಾರಿಸಲಾಗುತ್ತದೆ. ಅದರಲ್ಲಿ ಜಿರಳೆ ಕಂಡುಬರುವ ಸಾಧ್ಯತೆಯಿಲ್ಲ' ಎಂದು ಅವರು ಹೇಳಿದರು.
'ಪ್ರಸಾದ'ದ ಬಗ್ಗೆ ಭಕ್ತರು ಚಿಂತಿಸಬೇಡಿ ಎಂದು ರಾವ್ ಮನವಿ ಮಾಡಿದ್ದಾರೆ.
ನಂತರ, ದೇವಾಲಯ ಆಡಳಿತವು ಮುನ್ನೆಚ್ಚರಿಕೆ ಕ್ರಮವಾಗಿ ಪ್ಯಾಕೇಜಿಂಗ್ ಮತ್ತು ಪ್ಯಾಕೇಜಿಂಗ್ ಮಾಡುವ ಪ್ರದೇಶಗಳನ್ನು ಒಳಗೊಂಡಂತೆ ವಿತರಣಾ ಪ್ರಕ್ರಿಯೆಯ ಪರಿಶೀಲನೆಯನ್ನು ಪ್ರಾರಂಭಿಸಿದೆ ಎಂದು ವರದಿಯಾಗಿದೆ.
ಈ ಘಟನೆಯು ಧಾರ್ಮಿಕ ಸಂಸ್ಥೆಗಳಲ್ಲಿ, ವಿಶೇಷವಾಗಿ ಸಾವಿರಾರು ಭಕ್ತರು ಸೇವಿಸುವ ಪ್ರಸಾದ ತಯಾರಿಸುವ ಕಡೆಗಳಲ್ಲಿ, ಬಲವಾದ ಸ್ವಚ್ಛತಾ ಶಿಷ್ಟಾಚಾರಗಳನ್ನು ಪಾಲಿಸುವ ಅಗತ್ಯವನ್ನು ಒತ್ತಿಹೇಳಿದೆ.
Advertisement