
ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾನಾದ ಗಡಿ ರಸ್ತೆ ಸಂಸ್ಥೆ (BRO) ಶಿಬಿರ ಬಳಿ ಸಂಭವಿಸಿದ ಭಾರೀ ಹಿಮಪಾತದಲ್ಲಿ ಸಿಲುಕಿದ್ದ ನಾಲ್ವರು ಕಾರ್ಮಿಕರು ಗಾಯಗಳಿಂದ ಮೃತಪಟ್ಟಿದ್ದು, ಉಳಿದವರಿಗಾಗಿ ಭಾರತೀಯ ಸೇನಾಪಡೆ ಸೇರಿದಂತೆ ರಕ್ಷಣಾ ಪಡೆಗಳು ಕಾರ್ಯಾಚರಣೆಯನ್ನು ಮುಂದುವರೆಸಿವೆ.
ಶುಕ್ರವಾರ ಬೆಳಗ್ಗೆ ಸಂಭವಿಸಿದ ಹಿಮಪಾತದಲ್ಲಿ ಸಿಲುಕಿದ್ದ 55 ಗಡಿ ರಸ್ತೆ ಸಂಸ್ಥೆ ಕಾರ್ಮಿಕರ ಪೈಕಿ 50 ಮಂದಿಯನ್ನು ರಕ್ಷಿಸಲಾಗಿದೆ. ರಕ್ಷಿಸಲಾದ ಕೆಲವು ಕಾರ್ಮಿಕರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಪತ್ತೆಯಾದ ಕಾರ್ಮಿಕರ ಪತ್ತೆಗಾಗಿ ಹಗಲಿರುಳು ಶ್ರಮಿಸುತ್ತಿದ್ದೇವೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಸಮಾರೋಪಾದಿಯಲ್ಲಿ ನಡೆಯುತ್ತಿದೆ.ನಿರಂತರವಾಗಿ ಸುರಿಯುತ್ತಿರುವ ಹಿಮಪಾತ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಭಾರೀ ಹಿಮಪಾತದಿಂದ ಶುಕ್ರವಾರ ಸಂಜೆಯವರೆಗೂ ಸ್ಥಗಿತಗೊಂಡಿದ್ದ ರಕ್ಷಣಾ ಕಾರ್ಯಾಚರಣೆ ಶನಿವಾರ ಬೆಳಗ್ಗೆಯಿಂದ ಪುನರ್ ಆರಂಭಿಸಲಾಗಿದೆ ಎಂದು ಭಾರತೀಯ ಸೇನೆ PRO ಲೆಫ್ಟಿನೆಂಟ್ ಕರ್ನಲ್ ಮನೀಶ್ ಶ್ರಿವಾಸ್ತವ ತಿಳಿಸಿದ್ದಾರೆ.
ಭಾರತೀಯ ಸೇನೆ, ITBP ಮತ್ತು NDRF ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಹಿಮಪಾತದಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ಉತ್ತರಾಖಂಡ ಸರ್ಕಾರ ಸಹಾಯವಾಣಿ ತೆರೆದಿದೆ.
ಶನಿವಾರ ಬೆಳಿಗ್ಗೆ ಉತ್ತಮ ಹವಾಮಾನದೊಂದಿಗೆ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಪ್ರಾರಂಭವಾಗಿವೆ. ಹಿಮಪಾತದಡಿ ಸಿಲುಕಿದ್ದ 14 ಕಾರ್ಮಿಕರನ್ನು ರಕ್ಷಣಾ ತಂಡಗಳು ಯಶಸ್ವಿಯಾಗಿ ರಕ್ಷಿಸಿದ್ದು, ವೈದ್ಯಕೀಯ ನೆರವು ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಮನ ಸೇನಾ ಶಿಬಿರಕ್ಕೆ ಕರೆದೊಯ್ಯಲಾಗಿದೆ ಎಂದು ಚಮೋಲಿಯ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ನಂದ ಕಿಶೋರ್ ಜೋಶಿ ತಿಳಿಸಿದ್ದಾರೆ.
Advertisement