
ನವದೆಹಲಿ: ಯಾವುದೇ ವ್ಯಕ್ತಿಗೆ ದೈಹಿಕ ಅಂಗವೈಕಲ್ಯ ಇದ್ದ ಮಾತ್ರಕ್ಕೆ ನ್ಯಾಯಾಂಗ ಸೇವೆಯಲ್ಲಿ ನೇಮಕಾತಿಯನ್ನು ನಿರಾಕರಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕೆಲವು ರಾಜ್ಯಗಳ ನ್ಯಾಯಾಂಗ ಸೇವೆಗಳಲ್ಲಿ ಅಂತಹ ಅಭ್ಯರ್ಥಿಗಳಿಗೆ ಮೀಸಲಾತಿ ನಿರಾಕರಿಸಿದ್ದಕ್ಕಾಗಿ ಮಧ್ಯಪ್ರದೇಶದ ಅಂಧ ಅಭ್ಯರ್ಥಿಯ ತಾಯಿಯೊಬ್ಬರ ಸ್ವಯಂ ಪ್ರೇರಿತ ಅರ್ಜಿ ವಿಚಾರಣೆ ಆಲಿಸಿದ ನಂತರ ನ್ಯಾಯಮೂರ್ತಿ ಜೆ ಬಿ ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್ ಮಹಾದೇವನ್ ನೇತೃತ್ವದ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು ತೀರ್ಪು ನೀಡಿದೆ. ಸ್ವಯಂ ಪ್ರೇರಿತ ಪ್ರಕರಣ ಸೇರಿದಂತೆ ಆರು ಅರ್ಜಿಗಳ ತೀರ್ಪನ್ನು ಕಾಯ್ದಿರಿಸಿತ್ತು.
ಮಧ್ಯಪ್ರದೇಶದ ಅಂಧ ಅಭ್ಯರ್ಥಿಯ ತಾಯಿ ಕಳೆದ ವರ್ಷ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದು, ರಾಜ್ಯ ನ್ಯಾಯಾಂಗ ಸೇವೆಗಳಲ್ಲಿ ದೃಷ್ಟಿಹೀನ ಅಭ್ಯರ್ಥಿಗಳನ್ನು ನೇಮಿಸುವುದನ್ನು ತಡೆಯುವ ಮಧ್ಯಪ್ರದೇಶ ನ್ಯಾಯಾಂಗ ಸೇವೆಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳಲ್ಲಿನ ನಿಬಂಧನೆಯ ಬಗ್ಗೆ ಪ್ರಶ್ನಿಸಿದ್ದರು.
ಪತ್ರ ಸ್ವೀಕರಿಸಿದ ನಂತರ, ಸುಪ್ರೀಂ ಕೋರ್ಟ್ ಈ ಪತ್ರವನ್ನು ಸ್ವಯಂ ಪ್ರೇರಿತ ಅರ್ಜಿಯಾಗಿ ಪರಿವರ್ತಿಸಿತು ಮತ್ತು ಅದನ್ನು ಸ್ವಂತವಾಗಿ ವಿಚಾರಣೆ ಮಾಡಲು ನಿರ್ಧರಿಸಿತು.
ತೀರ್ಪು ಪ್ರಕಟಿಸಿದ ನ್ಯಾ. ಮಹದೇವನ್, ದೇಹ ದೌರ್ಬಲ್ಯದ ಕಾರಣಕ್ಕೆ ನ್ಯಾಯಾಂಗ ಸೇವೆಯ ನೇಮಕಾತಿಗಳಲ್ಲಿ ಯಾವುದೇ ತಾರತಮ್ಯ ಮಾಡಕೂಡದು. ಅಂತವರನ್ನೂ ಒಳಗೊಂಡ ಚೌಕಟ್ಟನ್ನು ಖಚಿತಪಡಿಸಿಕೊಳ್ಳಲು ರಾಜ್ಯವು ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಯಾವುದೇ ವ್ಯಕ್ತಿಯನ್ನು ಅಂಗವೈಕಲ್ಯ ಕಾರಣದಿಂದ ದೂರವಿಡುವಂತಿಲ್ಲ ಎಂದು ಹೇಳಿದ್ದಾರೆ.
ಯಾವುದೇ ವ್ಯಕ್ತಿಗೆ ನ್ಯಾಯಾಂಗ ಸೇವೆಯಲ್ಲಿ ನೇಮಕಾತಿಗಾಗಿ ಅವರ ಅಂಗವೈಕಲ್ಯದ ಕಾರಣದಿಂದ ಪರಿಗಣನೆಯನ್ನು ನಿರಾಕರಿಸಲಾಗುವುದಿಲ್ಲ" ಎಂದು ನ್ಯಾಯಮೂರ್ತಿ ಮಹಾದೇವನ್ ಮಹತ್ವದ ತೀರ್ಪನ್ನು ಪ್ರಕಟಿಸಿದ್ದಾರೆ.
Advertisement