
ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಭಾರತೀಯ ಕ್ರಿಕೆಟ್ ತಂಡಕ್ಕೆ ಕಾಂಗ್ರೆಸ್ ಮಂಗಳವಾರ ಶುಭ ಹಾರೈಸಿದೆ ಮತ್ತು ಇಡೀ ರಾಷ್ಟ್ರವು ಅವರನ್ನು ಹುರಿದುಂಬಿಸುತ್ತಿದೆ ಎಂದು ಹೇಳಿದೆ.
ಮಂಗಳವಾರ ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು ಎದುರಿಸಲಿದ್ದು, 2023ರ ಏಕದಿನ ವಿಶ್ವಕಪ್ ಫೈನಲ್ ಸೋಲಿನ ಸೇಡು ತೀರಿಸಿಕೊಳ್ಳಲು ಭಾರತಕ್ಕೆ ಇದೀಗ ಅವಕಾಶ ಸಿಕ್ಕಿದೆ. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಸೆಣಸಲಿವೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, 'ಇಂದು ಆಸೀಸ್ ವಿರುದ್ಧ ಹೋರಾಡುತ್ತಿರುವ ಮೆನ್ ಇನ್ ಬ್ಲೂ ತಂಡಕ್ಕೆ ಆಲ್ ದಿ ಬೆಸ್ಟ್. ಇಡೀ ರಾಷ್ಟ್ರವೇ ಅವರನ್ನು ಹುರಿದುಂಬಿಸುತ್ತಿದೆ!' ಎಂದಿದ್ದಾರೆ.
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ದೇಹತೂಕದ ಬಗ್ಗೆ ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ಮಾಡಿದ ಟೀಕೆಗಳ ಬೆನ್ನಲ್ಲೇ ಕಾಂಗ್ರೆಸ್ ಭಾರತ ತಂಡಕ್ಕೆ ಶುಭಕೋರಿದೆ.
ಭಾರತೀಯ ಕ್ರಿಕೆಟ್ ತಂಡದ ನಾಯಕನನ್ನು ಟೀಕಿಸಿದ ನಂತರ ಬಿಜೆಪಿ ನಾಯಕರು ಶಮಾ ಮೊಹಮ್ಮದ್ ಮತ್ತು ಕಾಂಗ್ರೆಸ್ ಪಕ್ಷದ ಮೇಲೆ ವಾಗ್ದಾಳಿ ನಡೆಸಿದರು. ಬಿಜೆಪಿ ಸಾಮಾಜಿಕ ಮಾಧ್ಯಮ ಮುಖ್ಯಸ್ಥ ಅಮಿತ್ ಮಾಳವಿಯಾ, 'ಚಾಂಪಿಯನ್ಸ್ ಟ್ರೋಫಿ ನಡೆಯುತ್ತಿರುವ ನಿರ್ಣಾಯಕ ಸಮಯದಲ್ಲಿ ತಂಡದ ನೈತಿಕತೆಯನ್ನು ಕುಗ್ಗಿಸಲೆಂದು ಪೂರ್ವಯೋಜಿತವಾಗಿ ಈ ರೀತಿಯ ಟೀಕೆ ಮಾಡಲಾಗಿದೆ' ಎಂದು ಆರೋಪಿಸಿದ್ದಾರೆ.
ಕ್ರಿಕೆಟ್ ದಂತಕಥೆಯ ರೋಹಿತ್ ಶರ್ಮಾ ಬಗ್ಗೆ ಶಮಾ ಮೊಹಮ್ಮದ್ ಅವರ ಹೇಳಿಕೆಗಳು ವೈಯಕ್ತಿಕವಾಗಿದ್ದು, ಅದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟಪಡಿಸಿದೆ ಮತ್ತು ಭವಿಷ್ಯದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ವಕ್ತಾರೆಗೆ ಸೂಚಿಸಿದೆ.
ಇದು ನನ್ನ ವೈಯಕ್ತಿಕ ಟೀಕೆಯಾಗಿದ್ದು, ಅನಗತ್ಯವಾಗಿ ಸಮಸ್ಯೆ ಸೃಷ್ಟಿಸಲಾಗುತ್ತಿದೆ. ರೋಹಿತ್ ಶರ್ಮಾ ಶರ್ಮಾ ಬಗ್ಗೆ ನನಗೆ ಹೆಮ್ಮೆ ಇದೆ. ಆದರೆ, ಅವರ ಫಿಟ್ನೆಸ್ ಬಗ್ಗೆ ಮಾತ್ರ ಮಾತನಾಡುತ್ತಿದ್ದೇನೆ ಎಂದು ಶಮಾ ಹೇಳಿದ್ದರು.
Advertisement