
ನವದೆಹಲಿ: ರಾಜೀವ್ ಗಾಂಧಿ ಕೇಂಬ್ರಿಡ್ಜ್ ಮತ್ತು ಇಂಪೀರಿಯಲ್ ಕಾಲೇಜಿನಲ್ಲಿ ಫೇಲ್ ಆಗಿದ್ದರೂ ಪ್ರಧಾನಿಯಾದದ್ದು ಅಚ್ಚರಿ ತಂದಿತ್ತು ಎಂದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ (Mani Shankar Aiyar) ಹೇಳಿದ್ದಾರೆ.
ಸಂದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದ ಮಣಿಶಂಕರ್ ಅಯ್ಯರ್, 'ಬ್ರಿಟನ್‌ನ ಕೇಂಬ್ರಿಡ್ಜ್ ಮತ್ತು ಇಂಪೀರಿಯಲ್ ಎರಡೂ ಕಾಲೇಜಿನಲ್ಲಿ ಫೇಲ್ ಆಗಿದ್ದ ಹಾಗೂ ಪೈಲಟ್ ಎಂಬ ಒಂದೇ ಹಿನ್ನೆಲೆ ಹೊಂದಿದ್ದ ರಾಜೀವ್ ಗಾಂಧಿ ಅವರನ್ನು ಪ್ರಧಾನಿ ಮಾಡಿದ್ದು ನಮಗೆಲ್ಲಾ ಅಚ್ಚರಿ ತಂದಿತ್ತು' ಎಂದು ಹೇಳಿದ್ದಾರೆ. ಆದರೆ ಈ ಸಂದರ್ಶನ ಯಾವಾಗಿನದ್ದು ಎಂಬುದು ಮಾತ್ರ ತಿಳಿದಿಲ್ಲ.
ಈ ಸಂದರ್ಶನದ ವಿಡಿಯೋವನ್ನು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಹಂಚಿಕೊಂಡಿದ್ದಾರೆ. 'ಇದು ಯಾವಾಗ ನಡೆದ ಸಂದರ್ಶನ ಎಂಬುದು ಗೊತ್ತಾಗಿಲ್ಲ. ಆ ವಿಡಿಯೋದಲ್ಲಿ ‘ರಾಜೀವ್ ಶೈಕ್ಷಣಿಕವಾಗಿ ವಿಫಲರಾಗಿದ್ದರು. ಉತ್ತೀರ್ಣರಾಗುವುದು ಅತ್ಯಂತ ಸುಲಭವಾಗಿರುವ ಕೇಂಬ್ರಿಡ್ಜ್‌ನಲ್ಲೂ ರಾಜೀವ್ ಫೇಲ್ ಆಗಿದ್ದರು. ಬಳಿಕ ಇಂಪೀರಿಯಲ್ ಕಾಲೇಜಿಗೆ ಸೇರಿಸಿದರೆ ಅಲ್ಲೂ ಅವರು ಫೇಲ್ ಆಗಿದ್ದರು. ಇಂಥ ಶೈಕ್ಷಣಿಕ ಹಿನ್ನೆಲೆ ಹೊಂದಿದ ವ್ಯಕ್ತಿ ಹೇಗೆ ಭಾರತದ ಪ್ರಧಾನಿಯಾದರು ಎಂಬುದು ಹಲವರ ಪ್ರಶ್ನೆ. ಈ ಕುರಿತ ನಿಗೂಢತೆ ಬಹಿರಂಗವಾಗಲಿ’ ಎಂದು ಕಾಂಗ್ರೆಸ್ ನಾಯಕರ ಕಾಲೆಳೆದಿದ್ದಾರೆ.
ವಿಡಿಯೋದಲ್ಲೇನಿದೆ?
‘ನಾನು ಹಾಗೂ ರಾಜೀವ್ ಕೇಂಬ್ರಿಡ್ಜ್‌ನಲ್ಲಿ ಸಹಪಾಠಿಗಳಾಗಿದ್ದೆವು. ಅಲ್ಲಿ ಅನುತ್ತೀರ್ಣರಾಗುವುದು ಬಹಳ ಅಪರೂಪ. ಅರ್ಥಾತ್, ಎಲ್ಲರನ್ನೂ ಅಲ್ಲಿ ಪಾಸ್ ಮಾಡಲಾಗುತ್ತದೆ. ಆದರೂ ರಾಜೀವ್ ಫೇಲ್ ಆದರು. ಬಳಿಕ ಲಂಡನ್‌ನ ಇಂಪೀರಿಯಲ್ ಕಾಲೇಜಿಗೆ ಹೋಗಿ ಅಲ್ಲೂ ಅನುತ್ತೀರ್ಣರಾದರು. ಅವರೊಬ್ಬ ಪೈಲಟ್ ಹೊರತೂ ಬೇರೇನೂ ಆಗಿರಲಿಲ್ಲ. ಆದರೂ ಭಾರತದಂಥ ದೇಶಕ್ಕೆ ಅವರನ್ನು ಹೇಗೆ ಪ್ರಧಾನಿಯಾಗಿ ಮಾಡಲಾಯಿತು ಎಂಬುದು ನಮಗೆಲ್ಲಾ ಅಚ್ಚರಿ ತಂದಿತ್ತು.’ ಎಂದು ಅಯ್ಯರ್ ವಿಡಿಯೋದಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ಸಮರ್ಥನೆ
ಇನ್ನು ಈ ವಿಡಿಯೋ ವ್ಯಾಪಕ ವೈರಲ್ ಆಗುತ್ತಲೇ ಈ ಕುರಿತು ಕಾಂಗ್ರೆಸ್ ನಾಯಕ ಹಾಗೂ ಸಂಸದ ತಾರಿಕ್ ಅನ್ವರ್ ರಾಜೀವ್ ಗಾಂಧಿ ಅವರನ್ನು ಸಮರ್ಥಿಸಿಕೊಂಡಿದ್ದು, ‘ಅತ್ಯುತ್ತಮ ವ್ಯಕ್ತಿಗಳೇ ಕೆಲವೊಮ್ಮೆ ಸೋಲುತ್ತಾರೆ. ಅಂಥದ್ದರಲ್ಲಿ ರಾಜೀವ್‌ರ ಶೈಕ್ಷಣಿಕ ವೈಫಲ್ಯ ದೊಡ್ಡದಲ್ಲ. ಅವರೆಂದೂ ರಾಜಕಾರಣದಲ್ಲಿ ಸೋಲಲಿಲ್ಲ. ಅವರು ಪ್ರಧಾನಿಯಾಗಿ 5 ವರ್ಷದಲ್ಲಿ ಸಾಧಿಸಿದ್ದನ್ನು ಮಾಡಿ ತೋರಿಸಿದವರು ಅತಿ ವಿರಳ’ ಎಂದು ಹೇಳಿದ್ದಾರೆ.
ಅಪೂರ್ಣ ವಿಡಿಯೋ?
ಇನ್ನು ಇದೇ ಸಂದರ್ಶನ ವಿಚಾರವಾಗಿ ಖಾಸಗಿ ಸುದ್ದಿವಾಹಿನಿ ಸುದ್ದಿ ಪ್ರಸಾರ ಮಾಡಿದ್ದು, ಅದರಲ್ಲಿ ಮಣಿಶಂಕರ್ ಅಯ್ಯರ್ ಅವರ ಸಂದರ್ಶನದ ಮುಂದುವರೆದ ಭಾಗದ ಕುರಿತು ಮಾಹಿತಿ ನೀಡಿದೆ. ಅದರಲ್ಲಿ ಅಯ್ಯರ್ ಅವರು, ‘ರಾಜೀವ್ ಅವರು ಅತ್ಯಂತ ಶ್ರೇಷ್ಠ ಪ್ರಧಾನಿಯಾಗಿದ್ದರು’ ಎಂದು ಕೂಡ ಹೇಳಿದ್ದಾರೆ ಎಂದು ವರದಿ ಹೇಳಿದೆ.
ಅಂತೆಯೇ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಆರಂಭದಲ್ಲಿ ‘ಮೂಕ ಗೊಂಬೆ’ ಎಂದು ಕೆಲವರು ಕರೆದಿದ್ದರು. ಆದರೆ ನಂತರದಲ್ಲಿ ಅವರು ರಾಜಕೀಯ ಶಕ್ತಿಯಾಗಿ ಬೆಳೆದರು. ರಾಜೀವ್ ಅವರ ಬಗ್ಗೆ ಆರಂಭದಲ್ಲಿ ಕೆಲವರು ಆಶ್ಚರ್ಯ ವ್ಯಕ್ತಪಡಿಸಿದ್ದರೂ ನಂತರ ‘ಅವರು ಅತ್ಯಂತ ಶ್ರೇಷ್ಠ ಪ್ರಧಾನಿಯಾಗಿದ್ದರು ಎಂದು ನಾನು ಈಗ ಹೇಳುತ್ತೇನೆ’ ಎಂದೂ ಅಯ್ಯರ್ ಅವರು ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
Advertisement