
ಭೋಪಾಲ್: ಛತ್ರಪತಿ ಸಂಭಾಜಿ ಮಹಾರಾಜ್ ಜೀವನವನ್ನು ಆಧರಿಸಿದ ಛಾವಾ ಚಿತ್ರ ಬಾಕ್ಸ್ ಆಫ್ಸೀಸ್ ನಲ್ಲಿ ಉತ್ತಮ ಗಳಿಕೆ ಕಾಣುತ್ತಿದ್ದು, ಇದರ ನಡುವೆಯೇ ಈ ಚಿತ್ರ ಹಲವು ಎಡವಟ್ಟುಗಳಿಗೂ ಕಾರಣವಾಗಿದೆ.
ಹೌದು.. ಛತ್ರಪತಿ ಸಂಭಾಜಿ ಮಹಾರಾಜ್ ಜೀವನವನ್ನು ಆಧರಿಸಿದ ಈ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಈಗಾಗಲೇ ಚಿತ್ರ ಬಾಕ್ಸ್ ಆಫೀಸ್ ನಲ್ಲಿ 500 ಕೋಟಿ ರೂ ಗಳಿಕೆ ಕಂಡಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. ಆದರೆ ಈ ಚಿತ್ರ ಇದೀಗ ಸಿನಿಮಾ ವಿಚಾರದ ಹೊರತಾಗಿಯೂ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಈ ಚಿತ್ರದಲ್ಲಿನ ದೃಶ್ಯವೊಂದನ್ನು ಆಧರಿಸಿ ಜನ ನಿಧಿಗಾಗಿ ಶೋಧ ನಡೆಸುತ್ತಿರುವ ಮಾಹಿತಿ ಬೆಳಕಿಗೆ ಬಂದಿದೆ.
ನಿಧಿಗಾಗಿ ಶೋಧ
ಈ ಛಾವಾ ಸಿನಿಮಾ ಮೊಘಲರ ಕಾಲದ ಕಥೆಯನ್ನು ಹೇಳುತ್ತದೆ. ಸಿನಿಮಾದಲ್ಲಿ ಮಧ್ಯಪ್ರದೇಶದ ಬುರ್ಹಾನ್‌ಪುರ, ಅಸೀಘರ್ ಕೋಟೆ ಕುರಿತು ಉಲ್ಲೇಖವಿದೆ. ಈ ಮೊಘಲರು ಮರಾಠರಿಂದ ಅಪಾರ ಚಿನ್ನ, ವಜ್ರಗಳನ್ನು ಲೂಟಿ ಮಾಡಿ ಅಸೀಘಾರ್ ಕೋಟೆಯಲ್ಲಿ ಇಟ್ಟಿದ್ದರು ಎಂದು ಸಿನಿಮಾದ ದೃಶ್ಯವೊಂದರಲ್ಲಿ ಹೇಳಲಾಗುತ್ತದೆ.
ಆದರೆ ಇದನ್ನೇ ನಿಜ ಎಂದು ನಂಬಿ ಜನ ಇದೀಗ ಕೆಲಸ ಕಾರ್ಯಗಳನ್ನು ಬಿಟ್ಟು ಶೋಧದಲ್ಲಿ ತೊಡಗಿದ್ದಾರೆ. ನೂರಾರು ಜನರು ಗುದ್ದಲಿ, ಹಾರೆ ಹಿಡಿದು ಭೂಮಿ ಅಗೆದು ಚಿನ್ನಕ್ಕಾಗಿ ಶೋಧ ಕಾರ್ಯ ನಡೆಸಿದ್ದಾರೆ. ಕೆಲವರಂತು ಮೆಟಲ್ ಡಿಟೆಕ್ಟರ್ ಸಾಧನ ತಂದು ಶೋಧ ನಡೆಸುತ್ತಿರುವ ವಿಡಿಯೋಗಳು ವೈರಲ್ ಆಗುತ್ತಿವೆ.
ಎಲ್ಲಿ ಶೋಧ? ಲೋಹದ ನಾಣ್ಯ ಸಿಕ್ತಿತಾ?
ಇತ್ತೀಚೆಗೆ ಬುರ್ಹಾನ್‌ಪುರದಿಂದ 18 ಕಿ.ಮೀ ದೂರದಲ್ಲಿರುವ ಆಸಿರ್‌ಗಢ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಾಡುವಾಗ ದರ್ಗಾದ ಬಳಿ ಇರುವ ಮಣ್ಣನ್ನು ಅಗೆದಿತ್ತು. ಈ ಮಣ್ಣನ್ನು ಹಾರೂನ್ ಶೇಖ್ ಎಂಬವರ ಹೊಲದಲ್ಲಿ ಹೋಗಿ ಹಾಕಲಾಗಿತ್ತು. ಹೊಲಕ್ಕೆ ಕೆಲಸ ಮಾಡಲು ಬಂದ ಕೂಲಿ ಕಾರ್ಮಿಕರಿಗೆ, ಹಾಕಿದ್ದ ಮಣ್ಣಿನಲ್ಲಿ ಇತಿಹಾಸ ಕಾಲದ ಲೋಹದ ನಾಣ್ಯಗಳು ಸಿಕ್ಕಿವೆ. ಈ ಬೆಳವಣಿಗೆ ಬೆನ್ನಲ್ಲೇ ಹೊಲದ ಸುತ್ತಮುತ್ತ ಪ್ರದೇಶದಲ್ಲಿ ಚಿನ್ನ, ಬೆಳ್ಳಿಯ ನಾಣ್ಯಗಳು ಸಿಗುತ್ತಿವೆ ಎಂದು ವದಂತಿ ಹಬ್ಬಿದೆ. ಕೂಡಲೇ ಈ ಸುದ್ದಿ ಸುತ್ತಲಿನ ಹಳ್ಳಿಗಳಲ್ಲಿ ವೈರಲ್ ಆಗಿದ್ದು, ಜನ ತಂಡೋಪತಂಡಗಳಾಗಿ ನೆಲ ಅಗೆಯುವ ವಸ್ತುಗಳನ್ನು ತೆಗೆದುಕೊಂಡು ಬಂದು ಇಲ್ಲಿ ಶೋಧ ನಡೆಸಿದ್ದಾರೆ.
ನಾಣ್ಯ ಪತ್ತೆ ಹೊಸದೇನಲ್ಲ
ಇನ್ನು ಇತಿಹಾಸ ತಜ್ಞರ ಪ್ರಕಾರ, ಬುರ್ಹಾನ್‌ಪುರದಲ್ಲಿ ನಾಣ್ಯಗಳ ಪತ್ತೆ ಹೊಸದು ಏನಲ್ಲ. ಮೊಘಲ್ ಯುಗದ ನಾಣ್ಯಗಳು ನಿಜವಾಗಿ ಹೊಲಗಳಲ್ಲಿ ಕಂಡು ಬಂದರೆ, ಸರ್ಕಾರ ನಿಗಾ ಇಡಬೇಕು. ಅಂತಹ ನಾಣ್ಯಗಳನ್ನು ವಶಕ್ಕೆ ತೆಗೆದುಕೊಳ್ಳಬೇಕು. ಜಿಲ್ಲಾಡಳಿತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮೊಘಲ್ ನಾಣ್ಯ ಪಡೆದುಕೊಂಡವರನ್ನು ತನಿಖೆ ಮಾಡಬೇಕು. ಸಿಕ್ಕ ನಾಣ್ಯಗಳನ್ನು ಸರ್ಕಾರಿ ಭದ್ರವಾಗಿ ಕಾಪಾಡಬೇಕು ಎಂದು ಇತಿಹಾಸಕಾರರು ಹೇಳುತ್ತಾರೆ.
ಈ ಹಿಂದೆ ಮೊಘಲರ ಕಾಲದಲ್ಲಿ ಬುರ್ಹಾನ್ಪುರ್ ಬಹಳ ಸಂಪತ್ತಿನಿಂದ ಸಮೃದ್ಧವಾಗಿತ್ತು. ಇಲ್ಲಿ ನಾಣ್ಯಗಳನ್ನು ತಯಾರಿಸಲು ಒಂದು ಟಂಕಸಾಲೆ ಇತ್ತು ಎಂದು ಇತಿಹಾಸ ಹೇಳುತ್ತದೆ. ಆಗಿನ ಜನರು ತಮ್ಮಲ್ಲಿದ್ದ ಸಂಪತ್ತು ಎಲ್ಲಿಡಬೇಕು ಎಂದು ಗೊತ್ತಾಗದೇ ಭೂಮಿ ಅಗೆದು ಭದ್ರವಾಗಿ ಇಡುತ್ತಿದ್ದರು. ಹೀಗಾಗಿ ಭೂಮಿ ಅಗೆದಾಗ ನಾಣ್ಯಗಳು ಈಗ ಪತ್ತೆ ಆಗುತ್ತಿವೆ ಎನ್ನುವುದು ಅಲ್ಲಗಳೆಯುವಂತಿಲ್ಲ ಎಂದು ಹೇಳುತ್ತಾರೆ.
Advertisement