Representational image
ಸಾಂದರ್ಭಿಕ ಚಿತ್ರ

ಮಧ್ಯ ಪ್ರದೇಶದ ಸಿಧಿ ಜಿಲ್ಲೆಯಲ್ಲಿ ಅಪಘಾತ: 8 ಮಂದಿ ಸಾವು, 13 ಮಂದಿಗೆ ಗಾಯ

ಸಿಧಿ-ಬಹ್ರಿ ರಸ್ತೆಯ ಉಪ್ನಿ ಪೆಟ್ರೋಲ್ ಪಂಪ್ ಬಳಿ ನಸುಕಿನ ಜಾವ ಸುಮಾರು 2.30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸ್ ಉಪ ವರಿಷ್ಠಾಧಿಕಾರಿ ಗಾಯತ್ರಿ ತಿವಾರಿ ತಿಳಿಸಿದ್ದಾರೆ.
Published on

ಸಿಧಿ(ಮಧ್ಯ ಪ್ರದೇಶ): ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಇಂದು ಸೋಮವಾರ ಮುಂಜಾನೆ ಟ್ರಕ್ ಮತ್ತು ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (SUV) ನಡುವೆ ಡಿಕ್ಕಿ ಸಂಭವಿಸಿ ಎಂಟು ಜನರು ಮೃತಪಟ್ಟು, 13 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಧಿ-ಬಹ್ರಿ ರಸ್ತೆಯ ಉಪ್ನಿ ಪೆಟ್ರೋಲ್ ಪಂಪ್ ಬಳಿ ನಸುಕಿನ ಜಾವ ಸುಮಾರು 2.30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸ್ ಉಪ ವರಿಷ್ಠಾಧಿಕಾರಿ ಗಾಯತ್ರಿ ತಿವಾರಿ ತಿಳಿಸಿದ್ದಾರೆ.

ಕುಟುಂಬದ ಸದಸ್ಯರನ್ನು ಕರೆದೊಯ್ಯುತ್ತಿದ್ದ ಎಸ್‌ಯುವಿ (ಟ್ಯಾಕ್ಸಿ ಸೇವೆ) ಟ್ರಕ್ ಸಿಧಿಯಿಂದ ಬಹ್ರಿಗೆ ಮೈಹಾರ್ ಕಡೆಗೆ ಹೋಗುತ್ತಿದ್ದಾಗ ವಾಹನಗಳು ಮುಖಾಮುಖಿ ಡಿಕ್ಕಿ ಹೊಡೆದವು. ಎಸ್‌ಯುವಿಯಲ್ಲಿ ಪ್ರಯಾಣಿಸುತ್ತಿದ್ದ ಏಳು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗಾಯಾಳುಗಳಾದ 14 ಜನರಲ್ಲಿ ಒಂಬತ್ತು ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ರೇವಾಕ್ಕೆ ಕಳುಹಿಸಲಾಯಿತು, ಅಲ್ಲಿ ಗಂಭೀರವಾಗಿ ಗಾಯಗೊಂಡವರಲ್ಲಿ ಒಬ್ಬರು ಮೃತಪಟ್ಟರು ಎಂದು ಸಿಧಿಯ ಪೊಲೀಸ್ ವರಿಷ್ಠಾಧಿಕಾರಿ ರವೀಂದ್ರ ವರ್ಮಾ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಉಳಿದವರಿಗೆ ಸಿಧಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಟ್ರಕ್ ಚಾಲಕನನ್ನು ಬಂಧಿಸಲಾಗಿದೆ ಎಂದು ತಿವಾರಿ ಹೇಳಿದರು.

ಅಪಘಾತ ಸಂಭವಿಸಿದಾಗ ಎಸ್‌ಯುವಿಯಲ್ಲಿದ್ದವರು ಮಗುವಿನ ಕೇಶ ಮುಂಡನ ಕಾರ್ಯಕ್ರಮಕ್ಕೆ ಮೈಹಾರ್‌ಗೆ ಹೋಗುತ್ತಿದ್ದರು. ಈ ವೇಳೆ ಎಸ್‌ಯುವಿ ತಪ್ಪು ದಿಕ್ಕಿನಿಂದ ಬರುತ್ತಿದ್ದರಿಂದ ಡಿಕ್ಕಿ ಸಂಭವಿಸಿದೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದ ತಂಡವನ್ನು ರಚಿಸಲಾಗಿದ್ದು, ಅಪಘಾತದ ಬಗ್ಗೆ ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತದೆ ಎಂದು ಎಸ್‌ಪಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಂತಾಪ

ಅಪಘಾತದಲ್ಲಿ ಮೃತಪಟ್ಟವರ ಬಗ್ಗೆ ಮುಖ್ಯಮಂತ್ರಿ ಮೋಹನ್ ಯಾದವ್ ತೀವ್ರ ಸಂತಾಪ ಸೂಚಿಸಿದ್ದಾರೆ. ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮುಖ್ಯಮಂತ್ರಿಗಳ ವಿವೇಚನಾ ನಿಧಿಯಿಂದ ತಲಾ 2 ಲಕ್ಷ ರೂ, ಗಂಭೀರವಾಗಿ ಗಾಯಗೊಂಡವರಿಗೆ ತಲಾ 1 ಲಕ್ಷ ರೂ ಮತ್ತು ಸಣ್ಣಪುಟ್ಟ ಗಾಯಗೊಂಡವರಿಗೆ 50,000 ರೂಪಾಯಿಗಳ ಆರ್ಥಿಕ ಸಹಾಯವನ್ನು ನೀಡುವುದಾಗಿ ಮುಖ್ಯಮಂತ್ರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಸ್ತಿಯಲ್ಲಿ ಅಪಘಾತ,ಐವರು ಸಾವು

ರಾಷ್ಟ್ರೀಯ ಹೆದ್ದಾರಿ-27 ರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಐವರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗೋಟ್ವಾದ ಟಾಟಾ ಏಜೆನ್ಸಿ ಬಳಿ ಬೆಳಗ್ಗೆ 7 ಗಂಟೆ ಸುಮಾರಿಗೆ ಬಸ್ತಿಯಿಂದ ಅಯೋಧ್ಯೆಯ ಕಡೆಗೆ ಹೋಗುತ್ತಿದ್ದ ಟ್ರಕ್ (RJ 18 GB 5710) ಮಾರ್ಗ ಬದಲಿಸಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಎಸ್ ಯುವಿ (GJ 17 BH 3923) ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕಲವರಿ ವೃತ್ತ ಅಧಿಕಾರಿ ಮತ್ತು ನಗರ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಮೃತಪಟ್ಟವರನ್ನು ಇನ್ನೂ ಗುರುತಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com