
ಕೇರಳ: ತೂಕ ಇಳಿಸಿಕೊಳ್ಳಲು ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಫಾಲೋ ಮಾಡ್ತಿದ್ದ ಹುಡುಗಿ ಈಗ ಜೀವ ಕಳೆದುಕೊಂಡಿದ್ದಾಳೆ. ಯೂಟ್ಯೂಬ್ ನೋಡಿ ಡಯಟ್ ಮಾಡಿ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿಯೊಬ್ಬಳು ಸಾವನ್ನಪ್ಪಿದ್ದಾಳೆ.
ಕಣ್ಣೂರಿನ ಕೂತುಪರಂಬದ ಮೇರುವಾಂಬೈ ಆರೋಗ್ಯ ಕೇಂದ್ರದ ಬಳಿಯ ಕೈತೇರಿಕಂಡಿ ನಿವಾಸಿ 18 ವರ್ಷದ ಎಂ. ಶ್ರೀನಂದ ಮೃತ ಯುವತಿ. ತಲಶ್ಶೇರಿ ಸಹಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಶನಿವಾರ ಕೊನೆಯುಸಿರೆಳೆದಿದ್ದಾಳೆ. ಮಟ್ಟನೂರಿನ ಪಳಸ್ಸಿ ರಾಜ ಎನ್‌ಎಸ್‌ಎಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿಪೂರ್ವ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು,
ಶ್ರೀನಂದ ಅಧಿಕ ತೂಕ ಹೊಂದಿದ್ದಾಳೆಂದು ಭಾವಿಸಿ ಯೂಟ್ಯೂಬ್ ನೋಡಿ ಆಹಾರ ಕ್ರಮವನ್ನು ಅನುಸರಿಸುತ್ತಿದ್ದಳು. ದೇಹಕ್ಕೆ ಬೇಕಾಗಿರುವ ಆಹಾರಕ್ಕಿಂತ ಕಡಿಮೆ ಆಹಾರ ಸೇವಿಸಿ ನಂತರ ಆಕೆಯ ಹೊಟ್ಟೆ ಮತ್ತು ಅನ್ನನಾಳ ಕುಗ್ಗಿ ಅನಾರೋಗ್ಯಕ್ಕೆ ಒಳಗಾಗಿ ಪ್ರಾಣ ಬಿಟ್ಟಿದ್ದಾಳೆ ಎಂದು ವರದಿಯಾಗಿದೆ.
ತೂಕ ಇಳಿಸಿಕೊಳ್ಳಲು ಬಯಸಿದ್ದರಿಂದ ಶ್ರೀನಂದ ತುಂಬಾ ಕಡಿಮೆ ಆಹಾರವನ್ನು ಸೇವಿಸುತ್ತಿದ್ದಳು. ಇದು ಆಕೆಯ ದೇಹದ ಮೇಲೆ ಗಂಭೀರ ಪರಿಣಾಮ ಬೀರಿದ್ದರಿಂದ, ಹುಡುಗಿಯ ಕುಟುಂಬವು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿತು. ಆದರೆ, ಅವರ ಸ್ಥಿತಿ ಹದಗೆಟ್ಟ ನಂತರ, ಅವರನ್ನು ತಲಶ್ಶೇರಿ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾದೆ ಯುವತಿ ಸಾವನ್ನಪ್ಪಿದ್ದಾಳೆ.
ಅನೇಕ ದಿನಗಳ ಹಿಂದೆಯೇ ಶ್ರೀನಂದಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತುರ್ತು ನಿಗಾ ಘಟಕದಲ್ಲಿ ಶ್ರೀನಂದಾ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಚಿಕಿತ್ಸೆ ನೀಡಿದ ವೈದ್ಯ ಡಾ. ನಾಗೇಶ್ ಪ್ರಭು, ಶ್ರೀನಂದಾ ಅನೋರೆಕ್ಸಿಯಾ ನರ್ವೋಸಾ (anorexia nervosa)ದಿಂದ ಬಳಲುತ್ತಿದ್ದರು ಎಂದಿದ್ದಾರೆ. ಇದು ತೂಕ ಹೆಚ್ಚಾಗುವ ತೀವ್ರ ಭಯದಿಂದ ಉಂಟಾಗುವ ಅಸ್ವಸ್ಥತೆಯಾಗಿದೆ.
ಶ್ರೀನಂದಾ ಸುಮಾರು ಆರು ತಿಂಗಳ ಹಿಂದೆ ಯುಟ್ಯೂಬ್ ನೋಡಿ ಈ ಡಯಟ್ ಶುರು ಮಾಡಿದ್ದರು. ಶ್ರೀನಂದಾಗೆ ಮೊದಲೇ ಚಿಕಿತ್ಸೆ ನೀಡುವಂತೆ ಕುಟುಂಬಸ್ಥರಿಗೆ ಆಪ್ತರು ಸಲಹೆ ನೀಡಿದ್ದರು. ಆದ್ರೆ ಕುಟುಂಬಸ್ಥರು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.
Advertisement