
ಛತ್ರಪತಿ ಸಂಭಾಜಿನಗರ: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ಕಬ್ಬು ತುಂಬಿದ್ದ ಟ್ರಕ್ ಪಲ್ಟಿಯಾಗಿ ಆರು ಕಾರ್ಮಿಕರು ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಬೆಳಗಿನ ಜಾವ 2.30 ರ ಸುಮಾರಿಗೆ ಟ್ರಕ್ ಕನ್ನಡ್ ನಿಂದ ಪಿಶೋರ್ ಗೆ ಹೋಗುತ್ತಿದ್ದಾಗ ಪಿಶೋರ್ ಘಾಟ್ ನಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಿಶೋರ್ ಘಾಟ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ಪಲ್ಟಿಯಾಗಿದೆ. ಟ್ರಕ್ ನಲ್ಲಿ ಸುಮಾರು 17 ಕಾರ್ಮಿಕರು ಪ್ರಯಾಣಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ.
ಕಾರ್ಮಿಕರು ಕಬ್ಬಿನ ರಾಶಿಯ ಕೆಳಗೆ ಸಿಲುಕಿಕೊಂಡಿದ್ದರು ಎಂದು ಕನ್ನಡ್ ನಗರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಮಾಹಿತಿ ಪಡೆದ ನಂತರ, ಪೊಲೀಸರು ಸ್ಥಳಕ್ಕೆ ಧಾವಿಸಿ ಸ್ಥಳೀಯರ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆಸಿದರು.
ಕಬ್ಬಿನ ರಾಶಿಯ ಅಡಿಯಲ್ಲಿ ನಾಲ್ವರು ಕಾರ್ಮಿಕರು ಮೃತಪಟ್ಟಿರುವುದು ಕಂಡುಬಂದಿದ್ದು, ಚಿಕಿತ್ಸೆಯ ಸಮಯದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮೃತರನ್ನು ಕಿಸಾನ್ ರಾಥೋಡ್ (30), ಮನೋಜ್ ಚವಾಣ್ (23), ಮಿಥುನ್ ಚವಾಣ್ (26), ವಿನೋದ್ ಚವಾಣ್ (28), ಕೃಷ್ಣ ರಾಥೋಡ್ (30) ಮತ್ತು ಜ್ಞಾನೇಶ್ವರ ಚವಾಣ್ (36) ಎಂದು ಗುರುತಿಸಲಾಗಿದೆ.
ಮೃತ ಕಾರ್ಮಿಕರು ಸತ್ಕುಂಡ್ ಗ್ರಾಮ, ಕನ್ನಡ್ ಹಾಗೂ ಇತರ ಹತ್ತಿರದ ಪ್ರದೇಶಗಳ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡ ಇತರ 11 ಕಾರ್ಮಿಕರನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆ ಮತ್ತು ಇತರ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
Advertisement