'ನಿಮ್ಮ ಹಿಂದಿ ಭಾಷೆಯನ್ನು ನಮ್ಮ ಮೇಲೆ ಹೇರಬೇಡಿ': ಪವನ್ ಕಲ್ಯಾಣ್ ಹೇಳಿಕೆಗೆ ಪ್ರಕಾಶ್ ರಾಜ್ ತಿರುಗೇಟು

ಜನ ಸೇನಾ ಪಕ್ಷದ 12ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಷಣ ಮಾಡಿದ್ದ ಪವನ್ ಕಲ್ಯಾಣ್, ರಾಜ್ಯದಲ್ಲಿ ಹಿಂದಿ ಹೇರಿಕೆಗೆ ಸಂಬಂಧಿಸಿದಂತೆ ತಮಿಳುನಾಡು ರಾಜಕಾರಣಿಗಳದ್ದು 'ಬೂಟಾಟಿಕೆ' ಎಂದು ಕರೆದಿದ್ದರು.
Prakash Raj-Pawan Kalyan
ಪವನ್ ಕಲ್ಯಾಣ್, ಪ್ರಕಾಶ್ ರಾಜ್
Updated on

ಚೆನ್ನೈ: ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಇತ್ತೀಚಿನ ಹಿಂದಿ ಭಾಷೆಯ ಕುರಿತ ಹೇಳಿಕೆಗಳಿಗಾಗಿ ನಟ-ರಾಜಕಾರಣಿ ಪ್ರಕಾಶ್ ರಾಜ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಶನಿವಾರ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, 'ನಿಮ್ಮ ಹಿಂದಿ ಭಾಷೆಯನ್ನು ನಮ್ಮ ಮೇಲೆ ಹೇರಬೇಡಿ. ಇದು ಇನ್ನೊಂದು ಭಾಷೆಯನ್ನು ದ್ವೇಷಿಸುವ ಬಗ್ಗೆ ಅಲ್ಲ; ನಮ್ಮ ಮಾತೃಭಾಷೆ ಮತ್ತು ನಮ್ಮ ಸಾಂಸ್ಕೃತಿಕ ಗುರುತನ್ನು ಸ್ವಾಭಿಮಾನದಿಂದ ರಕ್ಷಿಸುವ ಬಗ್ಗೆಯಾಗಿದೆ. ಯಾರಾದರೂ, ದಯವಿಟ್ಟು ಇದನ್ನು ಪವನ್ ಕಲ್ಯಾಣ್ ಅವರಿಗೆ ವಿವರಿಸಿ' ಎಂದು ಬರೆದಿದ್ದಾರೆ.

ಇತ್ತೀಚೆಗೆ ಕಾಕಿನಾಡದ ಪಿತಾಂಪುರಂದಲ್ಲಿ ನಡೆದ ಜನ ಸೇನಾ ಪಕ್ಷದ 12ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಷಣ ಮಾಡಿದ್ದ ಪವನ್ ಕಲ್ಯಾಣ್, ರಾಜ್ಯದಲ್ಲಿ ಹಿಂದಿ ಹೇರಿಕೆಗೆ ಸಂಬಂಧಿಸಿದಂತೆ ತಮಿಳುನಾಡು ರಾಜಕಾರಣಿಗಳದ್ದು 'ಬೂಟಾಟಿಕೆ' ಎಂದು ಕರೆದಿದ್ದರು ಮತ್ತು ಈ ನಾಯಕರು ಹಿಂದಿಯನ್ನು ವಿರೋಧಿಸುತ್ತಾರೆ. ಆದರೆ, ಆರ್ಥಿಕ ಲಾಭಕ್ಕಾಗಿ ತಮಿಳು ಚಲನಚಿತ್ರಗಳನ್ನು ಹಿಂದಿಯಲ್ಲಿ ಡಬ್ ಮಾಡಲು ಅವಕಾಶ ನೀಡುತ್ತಾರೆ ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಪ್ರಕಾಶ್ ರಾಜ್ ತಿರುಗೇಟು ನೀಡಿದ್ದಾರೆ.

'ಕೆಲವರು ಸಂಸ್ಕೃತವನ್ನು ಏಕೆ ಟೀಕಿಸುತ್ತಾರೆಂದು ನನಗೆ ಅರ್ಥವಾಗುತ್ತಿಲ್ಲ. ಆರ್ಥಿಕ ಲಾಭಕ್ಕಾಗಿ ತಮ್ಮ ಚಲನಚಿತ್ರಗಳನ್ನು ಹಿಂದಿಯಲ್ಲಿ ಡಬ್ ಮಾಡಲು ಅವಕಾಶ ನೀಡುವಾಗ ತಮಿಳುನಾಡಿನ ರಾಜಕಾರಣಿಗಳು ಹಿಂದಿಯನ್ನು ಏಕೆ ವಿರೋಧಿಸುತ್ತಾರೆ? ಅವರು ಬಾಲಿವುಡ್‌ನಿಂದ ಹಣವನ್ನು ಬಯಸುತ್ತಾರೆ. ಆದರೆ, ಹಿಂದಿಯನ್ನು ಸ್ವೀಕರಿಸಲು ನಿರಾಕರಿಸುತ್ತಾರೆ. ಅದು ಯಾವ ರೀತಿಯ ತರ್ಕ?' ಎಂದು ಪವನ್ ಕಲ್ಯಾಣ್ ಹೇಳಿದ್ದರು.

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಕೇಂದ್ರ ಸರ್ಕಾರವನ್ನು 'ಹಿಂದಿ ಹೇರಿಕೆ' ಎಂದು ಆರೋಪಿಸಿ, ಎನ್ಇಪಿಯಲ್ಲಿ ರೂಪಿಸಲಾದ ತ್ರಿಭಾಷಾ ಸೂತ್ರವನ್ನು ಜಾರಿಗೆ ತರಲು ನಿರಾಕರಿಸಿದ ಮಧ್ಯೆ ಕಲ್ಯಾಣ್ ಅವರ ಈ ಹೇಳಿಕೆ ಹೊರಬಿದ್ದಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com