
ಐಜ್ವಾಲ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಮಿಜೋರಾಂ ಪ್ರವಾಸದ ವೇಳೆಯಲ್ಲಿ 'ವಂದೇ ಮಾತರಂ ಗೀತೆ ಹಾಡಿದ ಏಳು ವರ್ಷದ ಬಾಲಕಿಗೆ ವಿಶೇಷವಾದ ಗಿಫ್ಟ್ ವೊಂದನ್ನು ನೀಡಿದ್ದಾರೆ.
ಹೌದು. ಐಜ್ವಾಲ್ ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅದ್ಬುತ ಕಂಠಸಿರಿ ಮೂಲಕ ವಂದೇ ಮಾತರಂ ಗೀತೆ ಹಾಡಿದ ಏಳು ವರ್ಷದ ಬಾಲಕಿ ಎಸ್ತರ್ ಲಾಲ್ದುಹಾವ್ಮಿ ಹ್ನಮ್ತೆಗೆ ಬ್ರಾಂಡೆಂಡ್ ಹೊಸ 'ಗಿಟಾರ್' ವೊಂದನ್ನು ಉಡುಗೊರೆಯಾಗಿ ನೀಡಿದ ಅಮಿತ್ ಶಾ, ಆಕೆಯ ಉಜ್ವಲ ಭವಿಷ್ಯಕ್ಕಾಗಿ ಹಾರೈಸಿದರು.
ಪುಟ್ಟ ಬಾಲಕಿಗೆ ಗಿಟಾರ್ ಉಡುಗೊರೆ ನೀಡಿ, ಆಕೆಯೊಂದಿಗೆ ಸಂವಾದಿಸುತ್ತಿರುವ ವಿಡಿಯೋ ಹಾಗೂ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಈ ಹಿಂದೆಯೂ ಗಾಯನಕ್ಕಾಗಿ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿಯಾಗಿದ್ದ ಎಸ್ತಾರ್, ಪ್ರತಿಭೆ ಮೆಚ್ಚಿ ಗಿಟಾರ್ ಉಡುಗೊರೆ ನೀಡಲಾಯಿತು. ಭಾರತ ಮಾತೆಯ ಮೇಲಿನ ಪ್ರೀತಿಯು ಅವರ ಪ್ರತಿ ಹಾಡಿನ ಮೂಲಕ ಹೊಳೆಯಿತು ಎಂದು ಅಮಿತ್ ಶಾ ಹೇಳಿದ್ದಾರೆ. ಈ ಅದ್ಬುತ ಕ್ಷಣವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಶಾ, ಇದು"ಮೋಡಿಮಾಡುವ ಅನುಭವ" ಎಂದು ಕರೆದಿದ್ದಾರೆ.
ಭಾರತದ ಮೇಲಿನ ಪ್ರೀತಿಯು ನಮ್ಮೆಲ್ಲರನ್ನೂ ಒಂದುಗೂಡಿಸುತ್ತದೆ. ಐಜ್ವಾಲ್‌ನಲ್ಲಿ ಇಂದು ವಂದೇ ಮಾತರಂ ಹಾಡುತ್ತಿರುವ ಮಿಜೋರಾಂನ ಅದ್ಭುತ ಬಾಲಕಿ ಎಸ್ತರ್ ಹಾಡು ತುಂಬಾ ಪ್ರಭಾವಿಸಿತು. ಭಾರತ್ ಮಾತೆಯ ಮೇಲಿನ ಪ್ರೀತಿಯು ಏಳು ವರ್ಷದ ಬಾಲಕಿಯ ಹಾಡಿನಲ್ಲಿ ವ್ಯಕ್ತವಾಯಿತು. ಆಕೆಯ ಹಾಡು ಮಂತ್ರಮುಗ್ಧಗೊಳಿಸಿತು ಎಂದು ಅವರು ಬರೆದುಕೊಂಡಿದ್ದಾರೆ
Advertisement