
ಗಾಂಧಿನಗರ: ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು 9 ತಿಂಗಳ ನಂತರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ನಿರ್ಗಮಿಸಿದ್ದು, ಅವರ ಸುರಕ್ಷಿತ ವಾಪಸಾತಿಗಾಗಿ ಭಾರತದಲ್ಲಿಯೂ ಯಜ್ಞ, ಹೋಮ, ಹವನಗಳು ನಡೆಯುತ್ತಿವೆ.
ಗುಜರಾತ್ ನಲ್ಲಿರುವ ಅವರ ಕುಟುಂಬದಲ್ಲಿ ಸಂತಸ ಮನೆ ಮಾಡಿದ್ದು, ಆಕೆಯ ಮರಳುವಿಕೆಯನ್ನು ಕಾತುರದಿಂದ ಎದುರು ನೋಡುತ್ತಿದೆ. ಸುನೀತಾ ವಿಲಿಯಮ್ಸ್ ತಾಯಿ, ಸಹೋದರ, ಮತ್ತು ಸಹೋದರಿ ಸೇರಿದಂತೆ ಎಲ್ಲರೂ ಖುಷಿಯಾಗಿದ್ದು, ಆಕೆ ಸುರಕ್ಷತೆಗಾಗಿ ದೇವಾಲಯಗಳಿಗೆ ಭೇಟಿ ನೀಡಿ, ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಗುಜರಾತ್‌ನಲ್ಲಿರುವ ಅವರ ಸೋದರ ಸಂಬಂಧಿ ದಿನೇಶ್ ರಾವಲ್, ಸುನೀತಾ ವಿಲಿಯಮ್ಸ್ ರಾಷ್ಟ್ರದ ಹೆಮ್ಮೆ ಎಂದು ಹೇಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ಇದು ನಮಗೆ ಒಂದು ದೊಡ್ಡ ದಿನವಾಗಿದೆ. ವಿಲಿಯಮ್ಸ್ ರಾಷ್ಟ್ರದ ಹೆಮ್ಮೆ. ಆಕೆಯ ಮರಳುವಿಕೆಗಾಗಿ ಯಜ್ಞವನ್ನು ಮಾಡುತ್ತಿದ್ದೇವೆ ಮತ್ತು ಹಿಂದಿರುಗಿದ ನಂತರ ಸಿಹಿ ವಿತರಿಸುತ್ತೇವೆ ಎಂದು ಅವರು ಹೇಳಿದರು.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ನಾಲ್ಕು ಗಗನಯಾತ್ರಿಗಳನ್ನು ಭೂಮಿಗೆ ಕರೆತರುವ ಸ್ಪೇಸ್‌ಎಕ್ಸ್ ಕ್ರ್ಯೂ-9 'ಡ್ರ್ಯಾಗನ್ ಫ್ರೀಡಮ್' ಬಾಹ್ಯಾಕಾಶ ನೌಕೆಯ ನೇರ ಪ್ರಸಾರವನ್ನು ನಾಸಾ ಒದಗಿಸುತ್ತಿದೆ.
288 ದಿನಗಳ ಬಳಿಕ ಭೂಮಿಗೆ ವಾಪಸ್ಸಾಗುತ್ತಿರುವ ಭಾರತೀಯ ಮೂಲದ ವಿಲಿಯಮ್ಸ್ ಮತ್ತು ವಿಲ್ಮೋರ್ ಜೊತೆಗೆ ಗಗನಯಾತ್ರಿಗಳಾದ ನಿಕ್ ಹೇಗ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೊರ್ಬುನೊವ್ ಇದ್ದಾರೆ.
Advertisement