
ನವದೆಹಲಿ: 571 ಕೋಟಿ ರೂ.ಗಳ ಸಿಸಿಟಿವಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಮೇಲೆ ದೆಹಲಿ ಸರ್ಕಾರದ ಭ್ರಷ್ಟಾಚಾರ ನಿಗ್ರಹ ದಳ(ACB) ಮಾಜಿ ಲೋಕೋಪಯೋಗಿ ಸಚಿವ ಮತ್ತು ಹಿರಿಯ ಎಎಪಿ ನಾಯಕ ಸತ್ಯೇಂದರ್ ಜೈನ್ ವಿರುದ್ಧ ಕೇಸ್ ದಾಖಲಿಸಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17A ಅಡಿಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆದ ನಂತರ ಮಂಗಳವಾರ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ(ACB) ಮಧುರ್ ವರ್ಮಾ ತಿಳಿಸಿದ್ದಾರೆ.
"ದೆಹಲಿಯಾದ್ಯಂತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಲ್ಲಿ ವಿಳಂಬ ಮಾಡಿದ್ದಕ್ಕಾಗಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(BEL)ಗೆ ವಿಧಿಸಲಾದ 16 ಕೋಟಿ ರೂ.ದಂಡವನ್ನು ಜೈನ್ ಮನ್ನಾ ಮಾಡಿದ್ದಾರೆ ಎಂಬ ಆರೋಪವಿದೆ.
7 ಕೋಟಿ ರೂ.ಗಳ ಲಂಚ ಪಡೆದ ನಂತರ 16 ಕೋಟಿ ರೂ. ಮನ್ನಾ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಸಿಸಿಟಿವಿ ಯೋಜನೆಯನ್ನು ಕಳಪೆ ರೀತಿಯಲ್ಲಿ ಕಾರ್ಯಗತಗೊಳಿಸಲಾಗಿದೆ ಎಂದು ಹಲವಾರು ದೂರುಗಳು ಬಂದಿವೆ. ಹಸ್ತಾಂತರದ ಸಮಯದಲ್ಲಿ ಹಲವಾರು ಕ್ಯಾಮೆರಾಗಳು ಕಾರ್ಯನಿರ್ವಹಿಸದಿರುವುದು ಸಹ ಕಂಡುಬಂದಿದೆ ಎಂದು ಅವರು ವರ್ಮಾ ಹೇಳಿದ್ದಾರೆ.
ಹೇಳಿಕೆಯ ಪ್ರಕಾರ, ಬಿಇಎಲ್ ಮತ್ತು ಅದರ ಗುತ್ತಿಗೆದಾರರ ಮೇಲೆ ವಿಧಿಸಲಾದ ದಂಡವನ್ನು ಮನ್ನಾ ಮಾಡಲು ಸಿಸಿಟಿವಿ ಯೋಜನೆಯ ನೋಡಲ್ ಅಧಿಕಾರಿಯಾಗಿದ್ದ ಜೈನ್ ಅವರಿಗೆ 7 ಕೋಟಿ ರೂ. ಲಂಚ ನೀಡಲಾಗಿದೆ ಎಂದು ಹೇಳಲಾದ ಸುದ್ದಿ ವರದಿಯನ್ನು ಆಧರಿಸಿ ಈ ಪ್ರಕರಣವನ್ನು ದಾಖಲಿಸಲಾಗಿದ್ದು, ದೆಹಲಿ ಮಾಜಿ ಸಚಿವರು ಮತ್ತೆ ಜೈಲು ಪಾಲಾಗುವ ಸಾಧ್ಯತೆ ಇದೆ.
ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಲ್ಲಿ 1.4 ಲಕ್ಷ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಯಲ್ಲಿ ಗಮನಾರ್ಹ ವಿಳಂಬದಿಂದಾಗಿ ಹಿಂದಿನ ಎಎಪಿ ಸರ್ಕಾರವು ಆರಂಭದಲ್ಲಿ ಆಗಸ್ಟ್ 2019 ರಲ್ಲಿ ಬಿಇಎಲ್ ಗೆ ದಂಡವನ್ನು ವಿಧಿಸಿತ್ತು.
ಈ ದಂಡವನ್ನು ಮನ್ನಾ ಮಾಡುವುದರ ಜೊತೆಗೆ, 1.4 ಲಕ್ಷ ಸಿಸಿಟಿವಿ ಕ್ಯಾಮೆರಾಗಳಿಗೆ ಹೆಚ್ಚುವರಿ ಆದೇಶವನ್ನು ಬಿಇಎಲ್‌ಗೆ ನೀಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ವರ್ಮಾ ತಿಳಿಸಿದ್ದಾರೆ.
Advertisement