
ಮೆಹ್ಸಾನಾ: 9 ತಿಂಗಳ ಕಾಲ ಬಾಹ್ಯಾಕಾಶದಲ್ಲಿದ್ದು ಇಂದು ಬುಧವಾರ ವಾಪಾಸ್ ಭೂಮಿಗೆ ಮರಳಿದ ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬಗ್ಗೆ ಎಲ್ಲೆಡೆ ಸಂತಸ ವ್ಯಕ್ತವಾಗುತ್ತಿದೆ.
ಸುನಿತಾ ವಿಲಿಯಮ್ಸ್ ಅವರ ಪೂರ್ವಜರು ಭಾರತದ ಗುಜರಾತ್ ಮೂಲದವರು. ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿ ಸುನೀತಾ ವಿಲಿಯಮ್ಸ್ ಅವರ ಪೂರ್ವಜರ ಹಳ್ಳಿಯ ನಿವಾಸಿಗಳು ಇಂದು ಬೆಳಗ್ಗೆಯಿಂದಲೇ ಸಂಭ್ರಮಾಚರಣೆಯಲ್ಲಿ ತೊಡಗಿರುವುದು ಕಂಡುಬಂತು. ಸುನಿತಾ ಮತ್ತು ಅವರ ಸಹೋದ್ಯೋಗಿ ಬುಚ್ ವಿಲಿಯಮ್ಸ್ ಅವರನ್ನು ಹೊತ್ತೊಯ್ದ ಸ್ಪೇಸ್‌ಎಕ್ಸ್ ಕ್ಯಾಪ್ಸುಲ್ ಫ್ಲೋರಿಡಾ ಕರಾವಳಿಯಿಂದ ಕೆಳಗೆ ಇಳಿಯಿತು.
ಜೂಲಾಸನ್‌ನಲ್ಲಿರುವವರು ದೂರದರ್ಶನ ಪರದೆಯಲ್ಲಿ ಕಾರ್ಯಕ್ರಮವನ್ನು ನೇರಪ್ರಸಾರ ವೀಕ್ಷಿಸಲು ಗ್ರಾಮದ ದೇವಾಲಯದಲ್ಲಿ ಒಟ್ಟುಗೂಡಿದಾಗ ಎಲ್ಲರ ಕಣ್ಣುಗಳು ವಿಲಿಯಮ್ಸ್ ಅವರ ಸುರಕ್ಷಿತ ವಾಪಸಾತಿಗೆ ಕಾಯುತ್ತಿದ್ದವು. ಅವರು ಇಳಿದ ತಕ್ಷಣ ಅಲ್ಲಿನ ನಿವಾಸಿಗಳು ಪಟಾಕಿಗಳನ್ನು ಸಿಡಿಸುತ್ತಾ, ನೃತ್ಯ ಮಾಡುವ ಮೂಲಕ ಮತ್ತು 'ಹರ್ ಹರ್ ಮಹಾದೇವ್' ಎಂದು ಕೂಗಿ ಸಂತಸದ ಕ್ಷಣ ಕಳೆದರು.
ಸುನಿತಾ ವಿಲಿಯಮ್ಸ್ ಅವರು ಸುರಕ್ಷಿತವಾಗಿ ಹಿಂತಿರುಗಲು ಗ್ರಾಮಸ್ಥರು ಯಜ್ಞಗಳನ್ನು ಮಾಡಿ ಪ್ರಾರ್ಥನೆಗಳನ್ನು ಸಲ್ಲಿಸಿದ್ದರು. ಸುನಿತಾ ವಿಲಿಯಮ್ಸ್ ತಂದೆ ದೀಪಕ್ ಪಾಂಡ್ಯ ಅವರ ಪೂರ್ವಜರ ಮನೆ ಎಂದು ಕರೆಯಲ್ಪಡುವ ಜೂಲಾಸನ್ ಗ್ರಾಮಸ್ಥರು ಅವರ ಸುರಕ್ಷತೆಗಾಗಿ ಪ್ರಾರ್ಥಿಸುತ್ತಿದ್ದರು ಎಂದು ಅವರ ಸೋದರಸಂಬಂಧಿ ನವೀನ್ ಪಾಂಡ್ಯ ಹೇಳುತ್ತಾರೆ.
ದೀಪಾವಳಿ ಮತ್ತು ಹೋಳಿಯಂತೆ ಹಬ್ಬದ ವಾತಾವರಣವನ್ನು ಸೃಷ್ಟಿಸಲು ಗ್ರಾಮಸ್ಥರು ಅವರ ಗೌರವಾರ್ಥವಾಗಿ ಪ್ರಾರ್ಥನೆ ಪಠಣ ಮತ್ತು ಪಟಾಕಿ ಸಿಡಿಸುವುದರೊಂದಿಗೆ ಭವ್ಯ ಮೆರವಣಿಗೆಯನ್ನು ಯೋಜಿಸಿದ್ದಾರೆ. ಗ್ರಾಮದ ಶಾಲೆಯಿಂದ ಅಖಂಡ ಜ್ಯೋತಿ ಇರಿಸಲಾಗಿರುವ ದೇವಾಲಯಕ್ಕೆ ಮೆರವಣಿಗೆಯನ್ನು ಕೊಂಡೊಯ್ಯಲಾಗುವುದು, ವಿದ್ಯಾರ್ಥಿಗಳು ಆಚರಣೆಯಲ್ಲಿ ಭಾಗಿಯಾಗುತ್ತಾರೆ. ಮೆರವಣಿಗೆ ದೇವಾಲಯವನ್ನು ತಲುಪಿದ ನಂತರ 'ಅಖಂಡ ಜ್ಯೋತಿ'ಯನ್ನು ಬೆಳಗಿಸಲಾಗುತ್ತದೆ. ಸುನೀತಾ ವಿಲಿಯಮ್ಸ್ ಅವರ ಛಾಯಾಚಿತ್ರದೊಂದಿಗೆ ನಾವು ಮೆರವಣಿಗೆಯನ್ನು ಆಯೋಜಿಸಿದ್ದೇವೆ, ದೇವಾಲಯದಲ್ಲಿ ಪ್ರಾರ್ಥನಾ ಪಠಣ ಮಾಡುತ್ತೇವೆ ಎಂದು ಪಾಂಡ್ಯ ಹೇಳಿದರು.
ಜೂಲಾಸನ್‌ಗೆ ಭೇಟಿ ನೀಡಲು ಸುನಿತಾ ವಿಲಿಯಮ್ಸ್ ಅವರನ್ನು ಆಹ್ವಾನಿಸಲು ಗ್ರಾಮಸ್ಥರು ಎದುರು ನೋಡುತ್ತಿದ್ದಾರೆ ಎಂದು ಅವರು ಹೇಳಿದರು.
ಭಾರತದ ನಂಟು
ಸುನಿತಾ ವಿಲಿಯಮ್ಸ್ ಅವರು ತಮ್ಮ ಬಾಹ್ಯಾಕಾಶ ಯಾತ್ರೆಗಳ ನಂತರ ಮೂರು ಬಾರಿ ಭಾರತಕ್ಕೆ ಭೇಟಿ ನೀಡಿದ್ದಾರೆ, ಅದರಲ್ಲಿ 2007 ಮತ್ತು 2013 ಸೇರಿದಂತೆ. 2008 ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆಯಲು ಭಾರತಕ್ಕೆ ಬಂದಿದ್ದರು. ಜುಲಾಸನ್ ಮೂಲದ ಅವರ ತಂದೆ 1957 ರಲ್ಲಿ ಅಮೆರಿಕಕ್ಕೆ ವಲಸೆ ಬಂದರು.
ಸುನಿತಾ ವಿಲಿಯಮ್ಸ್ ಅವರ ಬಾಹ್ಯಾಕಾಶ ಯಾತ್ರೆ ಆರಂಭದಲ್ಲಿ ಏಳು ದಿನಗಳವರೆಗೆ ನಡೆಸಲು ನಿರ್ಧರಿಸಲಾಗಿತ್ತು ಆದರೆ ತಾಂತ್ರಿಕ ದೋಷದಿಂದಾಗಿ ಅದನ್ನು ವಿಸ್ತರಿಸಲಾಯಿತು. ಐಎಸ್ ಎಸ್ ನಿಂದ ನಿರ್ಗಮಿಸಿದ ಕೆಲವೇ ಗಂಟೆಗಳ ನಂತರ ಅವರ ಸ್ಪೇಸ್‌ಎಕ್ಸ್ ಕ್ಯಾಪ್ಸುಲ್ ಮೆಕ್ಸಿಕೋ ಕೊಲ್ಲಿಗೆ ಪ್ಯಾರಾಚೂಟ್ ಮಾಡಿತು.
ಒಂಬತ್ತು ಸಲ ಬಾಹ್ಯಾಕಾಶ ನಡಿಗೆಗಳಲ್ಲಿ 62 ಗಂಟೆಗಳ ಕಾಲ ಪೂರ್ಣಗೊಳಿಸಿದ ಸುನಿತಾ ವಿಲಿಯಮ್ಸ್, ಮಹಿಳಾ ಗಗನಯಾತ್ರಿಯೊಬ್ಬರು ಬಾಹ್ಯಾಕಾಶ ನಡಿಗೆಯಲ್ಲಿ ಅತಿ ಹೆಚ್ಚು ಸಮಯ ಕಳೆದ ದಾಖಲೆಯನ್ನು ಹೊಂದಿದ್ದಾರೆ.
Advertisement