
ನವದೆಹಲಿ: ಒಂದು ವರ್ಷದಿಂದ ಸಾಗಿರುವ ಚಂಡೀಗಢ ರೈತರ ಹೋರಾಟಕ್ಕೆ ಸ್ಪಂದಿಸಿ ಕೇಂದ್ರ ತಂಡ ಇಂದು ಸಭೆ ನಡೆಸಿದ್ದು, ಮೇ 4ಕ್ಕೆ ಮತ್ತೊಂದು ಸುತ್ತಿನ ಸಭೆ ನಡೆಸಲು ನಿರ್ಣಯಿಸಲಾಗಿದೆ.
ಚಂಡೀಗಢದಲ್ಲಿ ರೈತರು ಮತ್ತು ಕೇಂದ್ರದ ನಡುವೆ ಈ ಹಿಂದೆ ನಾಲ್ಕು ಹಂತದಲ್ಲಿ ಮಾತುಕತೆ ನಡೆದರೂ ಸಫಲವಾಗದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೊನೆಗೆ ಪ್ರಭಾವಿ ಸಚಿವರು ಮತ್ತು ಉನ್ನತ ಅಧಿಕಾರಿಗಳ ಕೇಂದ್ರ ತಂಡವನ್ನೇ ಸಮಾಲೋಚನೆಗೆ ನೇಮಿಸಿದ್ದಾರೆ.
ಸಚಿವ ಪ್ರಲ್ಹಾದ ಜೋಶಿ ಅವರ ಮಧ್ಯಸ್ಥಿಕೆಯಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಪಿಯೂಷ್ ಗೋಯಲ್ ಮತ್ತು ಉನ್ನತ ಅಧಿಕಾರಿಗಳ ತಂಡ ಚಂಡಿಘಡಕ್ಕೆ ತೆರಳಿ ರೈತ ಮುಖಂಡರ ಸಭೆ ನಡೆಸಿ, ಕೇಂದ್ರ ಸರ್ಕಾರ ತಮ್ಮೊಂದಿಗಿದೆ ಎಂಬ ಭರವಸೆ ಮೂಡಿಸಿದೆ.
ಕಳೆದ ತಿಂಗಳು ಒಂದು ವಾರದಲ್ಲಿ ಸತತ ಎರೆಡು ಬಾರಿ ರೈತ ನಾಯಕರ ಸಭೆ ನಡೆಸಿ, ರೈತರ ಪ್ರಮುಖ ಬೇಡಿಕೆಗಳ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದ ಸಚಿವ ಜೋಶಿ ಮಧ್ಯಸ್ಥಿಕೆಯ ಕೇಂದ್ರ ತಂಡ ಇಂದೂ ಸಹ ರೈತ ಮುಖಂಡರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದೆ.
ಚಂಡೀಗಢದ ಸೆಕ್ಟರ್ -26 ರಲ್ಲಿರುವ ಮಹಾತ್ಮ ಗಾಂಧಿ ಸಾರ್ವಜನಿಕ ಆಡಳಿತ ಸಂಸ್ಥೆಯಲ್ಲಿ ಈ ಮಹತ್ವದ ಸಭೆ ನಡೆಯುತ್ತಿದ್ದು, ಸಚಿವದ್ವಯರು ಮತ್ತು ಕೇಂದ್ರ ಉನ್ನತ ಅಧಿಕಾರಿಗಳ ತಂಡ ರೈತರ ಹೋರಾಟ ಕೊನೆಗೊಳಿಸುವ ನಿಟ್ಟಿನಲ್ಲಿ ದೀರ್ಘ ಸಮಾಲೋಚನೆ ನಡೆಸಿದೆ. ಸಭೆಯಲ್ಲಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಕಾನೂನುಬದ್ಧ ಖಾತರಿ ಸೇರಿದಂತೆ ರೈತರ ವಿವಿಧ ಬೇಡಿಕೆಗಳ ಕುರಿತು ಸಚಿವದ್ವಯರು ಗಹನ ಚರ್ಚೆ ನಡೆಸಿದರು. ಪಂಜಾಬ್ ಸರ್ಕಾರದ ಸಚಿವರು ಮತ್ತು ಹಿರಿಯ ಅಧಿಕಾರಿಗಳೂ ಸಭೆಯಲ್ಲಿ ಭಾಗಿಯಾಗಿ ಸಮಾಲೋಚಿಸಿದರು.
ಸಂಯುಕ್ತ ಕಿಸಾನ್ ಮೋರ್ಚಾ(ರಾಜಕೀಯೇತರ), ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ನೇತೃತ್ವದ ರೈತ ನಾಯಕರೊಂದಿಗೆ ಸಚಿವ ಪ್ರಲ್ಹಾದ ಜೋಶಿ ಮತ್ತು ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್, ಪಿಯೂಷ್ ಗೋಯಲ್ ಅವರು ಫೆಬ್ರವರಿ 14 ಮತ್ತು 22 ರಂದು ಮಹತ್ವದ ಸಭೆ ನಡೆಸಿ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದ್ದರು. ಅಲ್ಲದೇ, ಮಾರ್ಚ್ 19ಕ್ಕೆ ಮತ್ತೆ ಸಭೆ ನಿಗದಿಪಡಿಸಿ ಬಂದಿದ್ದರು.
ಅಂತೆಯೇ, ಸಚಿವದ್ವಯರು ಇಂದು ಮತ್ತೊಂದು ಸುತ್ತಿನ ಸಭೆ ನಡೆಸಿ, ಬೇಡಿಕೆಗಳ ಕುರಿತು ಸಕಾರಾತ್ಮಕ ಚರ್ಚೆ ನಡೆಸಿದ್ದು, ರೈತರಲ್ಲಿ ಆತ್ಮವಿಶ್ವಾಸ ಮೂಡಿಸಿದರು. ಸಚಿವರು ಮೊದಲಿಗೆ, ಕಳೆದ 113 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದು, ರೈತರು ಸಕಾರಾತ್ಮಕ ಸಂಕೇತವೆಂದೇ ಪರಿಗಣಿಸಿದರು.
ರೈತ ಹೋರಾಟ ಹಿನ್ನಲೆಯಲ್ಲಿ ಹರಿಯಾಣ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಇಲ್ಲಿಯವರೆಗೆ, ಸುಪ್ರೀಂ ಕೋರ್ಟ್‌ನಲ್ಲಿ 10 ವಿಚಾರಣೆಗಳು ನಡೆದಿವೆ. ಈ ಮಧ್ಯೆ ಜಟಿಲ ಸಮಸ್ಯೆ ಬಗೆಹರಿಸಲು ಸಚಿದ್ವಯರು ನಡೆಸಿದ ಸಭೆ ಬಹುತೇಕ ಯಶಸ್ವಿಕಾಣತೊಡಗಿದೆ. ರೈತರ ಸಮಸ್ಯೆಗಳನ್ನು ಅರಿತಿರುವ ಪ್ರಲ್ಹಾದ ಜೋಶಿ, ಶಿವರಾಜ್ ಸಿಂಗ್, ಪಿಯೂಷ್ ಗೋಯಲ್ ರೈತಪರ ನಿಲುವುಳ್ಳವರು ಮತ್ತು ಪ್ರಭಾವಿ ಸಚಿವರು. ಇವರ ಸಕಾರಾತ್ಮಕ ಸ್ಪಂದನೆ ಮತ್ತು ಮಧ್ಯಸ್ಥಿಕೆಯಲ್ಲಿ ಹೋರಾಟಕ್ಕೆ ಒಂದು ತಾರ್ಕಿಕ ಅಂತ್ಯ ಕಾಣಲಿದೆ ಎಂದು ರೈತರು ಆಶಾಭಾವನೆ ವ್ಯಕ್ತಪಡಿಸಿದರು.
Advertisement