
ಚೆನ್ನೈ: ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಜನಸಂಖ್ಯೆಯ ಆಧಾರದ ಮೇಲೆ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಿದರೆ ದಕ್ಷಿಣ ಭಾರತವು ರಾಜಕೀಯ ಧ್ವನಿ ಕಳೆದುಕೊಳ್ಳುತ್ತದೆ ಎಂದು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಶನಿವಾರ ಹೇಳಿದ್ದಾರೆ.
ಚೆನ್ನೈನಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೆದಿದ್ದ ಲೋಕಸಭಾ ಕ್ಷೇತ್ರಗಳ ವಿಂಗಡಣೆಯ ಕುರಿತ ಸಭೆಯನ್ನುದ್ದೇಶಿಸಿ ಮಾತನಾಡಿದ ರೆಡ್ಡಿ, ರಾಜಕೀಯ ಪಕ್ಷಗಳು ಮತ್ತು ದಕ್ಷಿಣದ ನಾಯಕರು, ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ವಿಂಗಡಣೆ ಕ್ರಮವನ್ನು ವಿರೋಧಿಸಬೇಕು ಕರೆ ನೀಡಿದರು.
ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆ ಜಾರಿಗೆ ತಂದರೆ "ಉತ್ತರ ಪ್ರದೇಶವು ನಮ್ಮನ್ನು ದ್ವಿತೀಯ ನಾಗರಿಕರನ್ನಾಗಿ ಮಾಡುತ್ತದೆ" ಎಂದು ಹೇಳಿದರು.
"... ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರ ವಿಂಗಡಣೆಯನ್ನು ನಾವು ಒಪ್ಪಿಕೊಳ್ಳುವುದಿಲ್ಲ. ಏಕೆಂದರೆ ಯುಪಿ, ಬಿಹಾರ, ಮಧ್ಯ ಪ್ರದೇಶ ರಾಜಸ್ಥಾನದಂತಹ ರಾಜ್ಯಗಳು ದೇಶದ ಉಳಿದ ಭಾಗಗಳಲ್ಲಿಯೇ ಹೆಚ್ಚು ಪ್ರಾಬಲ್ಯ ಸಾಧಿಸುತ್ತವೆ. ನಾವು ಅದನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ" ಎಂದರು.
ಬಿಜೆಪಿ 'ಜನಸಂಖ್ಯಾ ದಂಡ' ನೀತಿಯನ್ನು ಜಾರಿಗೆ ತರುತ್ತಿದೆ ಎಂದು ಆರೋಪಿಸಿದ ತೆಲಂಗಾಣ ಸಿಎಂ, ತೆಲಂಗಾಣ ಮತ್ತು ಇತರ ರಾಜ್ಯಗಳು ದೇಶದ ಏಕತೆಯನ್ನು ಗೌರವಿಸುತ್ತವೆಯಾದರೂ, ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರ ವಿಂಗಡಣೆಯನ್ನು ಒಪ್ಪಿಕೊಳ್ಳುವುದಿಲ್ಲ" ಎಂದರು.
ಲೋಕಸಭಾ ಸ್ಥಾನಗಳನ್ನು ಹೆಚ್ಚಿಸಬಾರದು. ಆದರೆ ರಾಜ್ಯಗಳೊಳಗೆ ಕ್ಷೇತ್ರ ವಿಂಗಡಣೆ ಮಾಡಬೇಕು. ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಸೀಟುಗಳನ್ನು ಹೆಚ್ಚಿಸದೆ ಕ್ಷೇತ್ರ ಪುನರ್ವಿಂಗಡಣೆ ಜಾರಿಗೆ ತಂದಿದ್ದರು. ಏಕೆಂದರೆ ಇದು ರಾಜ್ಯಗಳ ನಡುವೆ ರಾಜಕೀಯ ಅಧಿಕಾರದ ಅಸಮತೋಲನವನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದರು.
Advertisement