
ಚೆನ್ನೈ: ರಾಷ್ಟ್ರದ ಗಮನ ಸೆಳೆಯುವಷ್ಟು ರಾಜಕೀಯ ಬಲ ಇಲ್ಲದ ಕಾರಣ ನ್ಯಾಯಕ್ಕಾಗಿನ ರಾಜ್ಯದ ಧ್ವನಿಯನ್ನು ಕಡೆಗಣಿಸಲಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹೇಳಿದ್ದಾರೆ. ನ್ಯಾಯೋಚಿತ ಕ್ಷೇತ್ರ ಪುನರ್ ವಿಂಗಡಣೆಗಾಗಿ ಚೆನ್ನೈನಲ್ಲಿ ಶನಿವಾರ ಆಯೋಜಿಸಿದ ಜಂಟಿ ಕ್ರಿಯಾ ಸಮಿತಿ ಸಭೆಯಲ್ಲಿ ಮಾತನಾಡಿದ ಸ್ಟಾಲಿನ್, ಸಂಸತ್ತಿನಲ್ಲಿ ನಮ್ಮ ಪ್ರಾತಿನಿಧ್ಯವನ್ನು ಕಡಿಮೆ ಮಾಡುವುದರಿಂದ ನಮ್ಮ ರಾಜಕೀಯ ಬಲವು ಕಡಿಮೆಯಾಗುತ್ತದೆ ಎಂದರು.
ಮಣಿಪುರದಲ್ಲಿ ಎರಡು ವರ್ಷಗಳಿಂದ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಕೇಂದ್ರದ ಮೌನವು ಸಾಕಷ್ಟು ರಾಜಕೀಯ ಬಲವಿಲ್ಲದ ರಾಜ್ಯಗಳಲ್ಲಿ ಸರ್ಕಾರದ ನಿಷ್ಕ್ರಿಯತೆಗೆ ಉದಾಹರಣೆಯಾಗಿದೆ ಎಂದು ಸಿಎಂ ಇದೇ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.
ಕ್ಷೇತ್ರ ಪುನರ್ ವಿಂಗಡಣೆಯಿಂದ ಪ್ರಭಾವಕ್ಕೊಳಗಾಗುವ ರಾಜ್ಯಗಳ ರಾಜಕೀಯ ನಾಯಕರು ಮೊದಲ ಜಂಟಿ ಕ್ರಿಯಾ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದರು. ಕೇರಳ ಸಿಎಂ ಪಿಣರಾಯಿ ವಿಜಯನ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಪಂಜಾಬ್ ಸಿಎಂ ಭಗವಂತ್ ಮಾನ್, ಕರ್ನಾಟಕ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಹೋರಾಟ ಕ್ಷೇತ್ರ ಪುನರ್ ವಿಂಗಡಣೆ ವಿರುದ್ಧ ಅಲ್ಲ. ಆದರೆ ನ್ಯಾಯಯುತವಾಗಿ ಮಾಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಇದು ರಾಜ್ಯಗಳ ಸೀಟುಗಳಿಗೆ ಸಂಬಂಧಿಸಿಲ್ಲ. ಇದು ನಮ್ಮ ಹಕ್ಕು, ಭವಿಷ್ಯವಾಗಿದ್ದು, ರಾಜ್ಯಗಳ ಸ್ವಾಯತ್ತತೆಯನ್ನು ಖಾತ್ರಿಪಡಿಸಿದರೆ ಮಾತ್ರ, ಭಾರತದಲ್ಲಿ ಒಕ್ಕೂಟ ವ್ಯವಸ್ಥೆ ಮೇಲುಗೈ ಸಾಧಿಸುತ್ತದೆ ಎಂದರು.
ಜನಸಂಖ್ಯಾವಾರು ವಿಂಗಡಣೆಯಿಂದ ಆಗುವ ದುಷ್ಪರಿಣಾಮ:
ಜನಸಂಖ್ಯಾವಾರು ವಿಂಗಡಣೆಯಿಂದ ಆಗುವ ದುಷ್ಪರಿಣಾಮಗಳನ್ನು ವಿವರಿಸಿದ ಅವರು, ಪ್ರಾತಿನಿಧ್ಯ ಕಡಿಮೆಯಾಗುವುದರಿಂದ ರಾಜ್ಯಗಳು ಕೇಂದ್ರದಿಂದ ಬರಬೇಕಾದ ಹಣ ಪಡೆಯಲು ಹರಸಾಹಸ ಪಡಬೇಕಾಗುತ್ತದೆ. ಅನಗತ್ಯ ಕಾನೂನುಗಳನ್ನು ಜಾರಿಗೆ ತರುತ್ತವೆ, ನಮ್ಮ ಜನರ ಮೇಲೆ ಪರಿಣಾಮ ಬೀರುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ, ಮಹಿಳಾ ಸಬಲೀಕರಣಕ್ಕೆ ಹಿನ್ನಡೆಯಾಗುತ್ತದೆ, ವಿದ್ಯಾರ್ಥಿಗಳು ತಮ್ಮ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. ರೈತರಿಗೆ ಬೆಂಬಲ ಸಿಗಲ್ಲ. ನಮ್ಮ ಸಂಸ್ಕೃತಿ, ಐಡೆಂಟಿಟಿ, ಪ್ರಗತಿ ಮೇಲೆ ಹೊಡೆತ ಬೀಳಲಿದೆ. ಸಾಮಾಜಿಕ ನ್ಯಾಯ ಸಿಗಲ್ಲ. ಎಸ್‌ಸಿ/ಎಸ್‌ಟಿ ಸಮುದಾಯಗಳ ಮೇಲೆ ಪರಿಣಾಮ ಬೀರುತ್ತವೆ ಎಂದರು.
ದೇಶದಲ್ಲಿ ರಾಜಕೀಯವಾಗಿ ನಾವು ದುರ್ಬಲರಾಗುತ್ತೇವೆ. ಇದು ಭಾರತದ ಒಕ್ಕೂಟವನ್ನು ರಕ್ಷಿಸುವ ಮಹತ್ವದ ದಿನವಾಗಿ ಇತಿಹಾಸದ ಪುಟ ಸೇರಲಿದೆ ಎಂದು ಪುನರುಚ್ಚರಿಸಿದ ಸ್ಟಾಲಿನ್, ಬಿಜೆಪಿ ಯಾವಾಗಲೂ ರಾಜ್ಯಗಳ ಹಕ್ಕುಗಳನ್ನು ಕಸಿದುಕೊಳ್ಳುವುದನ್ನೇ ಬಯಸುತ್ತದೆ. ಈ ಬೆದರಿಯನ್ನು ಅರ್ಥ ಮಾಡಿಕೊಂಡು ತಮಿಳುನಾಡು ಅದರ ವಿರುದ್ಧ ಅಭೂತಪೂರ್ವವಾಗಿ ಒಗ್ಗೂಡಿದೆ. ದೇಶದ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆ ರಕ್ಷಿಸಲು ಇದೇ ರೀತಿಯಲ್ಲಿ ಒಗ್ಗೂಡಬೇಕಾಗಿದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ನಾಯಕರ ಬಳಿ ಮನವಿ ಮಾಡಿಕೊಂಡರು.
ಈ ವಿಚಾರದಲ್ಲಿ ರಾಜಕೀಯ ಮತ್ತು ಕಾನೂನು ಕ್ರಮದ ಹೋರಾಟಕ್ಕೆ 'ತಜ್ಞರಸಮಿತಿ'ಯನ್ನು ಪ್ರಸ್ತಾಪಿಸಿದರು. "ಜನಸಂಖ್ಯೆ ಆಧಾರಿತ ಡಿಲಿಮಿಟೇಶನ್‌ಗೆ ಅವಕಾಶ ನೀಡಬಾರದು ಎಂದು ನಾವೆಲ್ಲರೂ ನಿರ್ಧರಿಸಬೇಕು. ಹೆಚ್ಚಿನ ಜನ ಸಂಖ್ಯೆ ಹೊಂದಿರುವ ರಾಜ್ಯಗಳನ್ನು ಶಿಕ್ಷಿಸಲು ಬಿಡಬಾರದು ಎಂದು ಅವರು ಹೇಳಿದರು.
Advertisement