
ಹೈದರಾಬಾದ್: ಟಿವಿ ನಿರೂಪಕಿ ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷದ ವಕ್ತಾರೆ ಶ್ಯಾಮಲಾ ರೆಡ್ಡಿ ಅವರು ಬೆಟ್ಟಿಂಗ್ ಆ್ಯಪ್ ಪ್ರಕರಣದಲ್ಲಿ ಸೋಮವಾರ ಹೈದರಾಬಾದ್ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಪಂಜಗುಟ್ಟಾ ಪೊಲೀಸ್ ಠಾಣೆಯಲ್ಲಿ ತನಿಖಾಧಿಕಾರಿಯ ಮುಂದೆ ಹಾಜರಾದ ಶ್ಯಾಮಲಾಗೆ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ. ಇತ್ತೀಚಿಗೆ ಬೆಟ್ಟಿಂಗ್ ಆ್ಯಪ್ ಪ್ರಚಾರ ಮಾಡಿದ ಆರೋಪದ ಮೇಲೆ ಹಲವಾರು ಸೋಶಿಯಲ್ ಮೀಡಿಯಾ ಪ್ರಭಾವಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕಳೆದ ವಾರ ಎಫ್ ಐಆರ್ ರದ್ದುಗೊಳಿಸುವಂತೆ ಕೋರಿ ತೆಲಂಗಾಣ ಹೈಕೋರ್ಟ್‌ಗೆ ಶ್ಯಾಮಲಾ ರೆಡ್ಡಿ ಅರ್ಜಿ ಸಲ್ಲಿಸಿದ್ದರು. ಆದರೆ ರಿಲೀಫ್ ನೀಡಲು ನಿರಾಕರಿಸಿದ ನ್ಯಾಯಾಲಯ ಆಕೆಯನ್ನು ಬಂಧಿಸದಂತೆ ಪೊಲೀಸರಿಗೆ ಸೂಚಿಸಿತ್ತು.ಅಲ್ಲದೇ ಪೊಲೀಸ್ ಠಾಣೆಗೆ ಹಾಜರಾಗುವಂತೆ ನ್ಯಾಯಾಲಯ ಆಕೆಗೆ ನಿರ್ದೇಶನ ನೀಡಿತ್ತು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ನಟಿ ವಿಷ್ಣು ಪ್ರಿಯಾ ಮತ್ತು ರಿತು ಚೌಧರಿ ಪೊಲೀಸರ ಮುಂದೆ ಹಾಜರಾಗಿದ್ದರು. ಮೊಬೈಲ್ ಆ್ಯಪ್ ಮತ್ತು ವೆಬ್ ಸೈಟ್ ಗಳಲ್ಲಿ ಜೂಜಾಟ ಪ್ರೋತ್ಸಾಹಿಸುವ ಮೂಲಕ ಸಾರ್ವಜನಿಕ ಜೂಜಾಟದ ಕಾಯ್ದೆ 1867 ಅನ್ನು ಉಲ್ಲಂಘಿಸಲಾಗಿದೆ ಎಂದು ಖಾಸಗಿ ಉದ್ಯೋಗಿ ವಿನಯ್ ವಂಗಾಲ (40) ನೀಡಿದ ದೂರಿನ ಆಧಾರದ ಮೇಲೆ ಮಾರ್ಚ್ 17 ರಂದು ಪ್ರಕರಣವನ್ನು ದಾಖಲಿಸಲಾಗಿತ್ತು.
ಟಾಲಿವುಡ್ ನಟರಾದ ರಾಣಾ ದಗ್ಗುಬಾಟಿ, ವಿಜಯ ದೇವರಕೊಂಡ, ಪ್ರಕಾಶ್ ರಾಜ್, ಮಂಚು ಲಕ್ಷ್ಮಿ, ನಿಧಿ ಅಗರ್ವಾಲ್ ಮತ್ತಿತರ 19 ಮಂದಿ ವಿರುದ್ಧ ಮಾರ್ಚ್ 20 ರಂದು ಮಿಯಾಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Advertisement