
ಮುಂಬೈ: ಹಾಸ್ಯದ ಮೂಲಕ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಟೀಕಿಸಿದ್ದ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ವಿರುದ್ಧ ಶಿವಸೇನೆ ತೀವ್ರವಾಗಿ ಕಿಡಿಕಾರಿದ್ದು, ಕುನಾಲ್ ಅವರು ಕಾರ್ಯಕ್ರಮ ನೀಡಿದ್ದ ಸ್ಟುಡಿಯೋ ಮೇಲೆ ಕಾರ್ಯಕರ್ತರು ದಾಂಧಲೆ ನಡೆಸಿ. ಧ್ವಂಸ ಮಾಡಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ಕುನಾಲ್ ಕಾಮ್ರಾ ಅವರು ಮುಂಬೈನ ಹ್ಯಾಬಿಟಾಟ್ ಕಾಮಿಡಿ ಕ್ಲಬ್‌ನಲ್ಲಿ ಕಾರ್ಯಕ್ರಮ ನೀಡುವಾಗ ಮಹಾರಾಷ್ಟ್ರದ ರಾಜಕೀಯ ವಿಭಜನೆಯ ಬಗ್ಗೆ ಮಾತನಾಡಿದ್ದರು.
ಉಲ್ಲೇಖಿಸಿ ದಿಲ್ ತೋ ಪಾಗಲ್ ಹೈ ಹಾಡನ್ನು ಅಣಕಿಸುವ ರೀತಿಯಲ್ಲಿ ರಾಜಕೀಯ ಪಕ್ಷಗಳನ್ನು ವಿಲೀನಗೊಳಿಸಿ ಹಾಡಿದ್ದರು. ಆದರೆ, ಕಾಮ್ರಾ ಶಿಂಧೆ ಅವರ ಹೆಸರನ್ನು ಸ್ಪಷ್ಟವಾಗಿ ಎಲ್ಲೂ ಉಲ್ಲೇಖಿಸರಲಿಲ್ಲ.
ಏಕನಾಥ್ ಶಿಂಧೆ - ಉದ್ದವ್ ಠಾಕ್ರೆ ನಡುವಿನ ರಾಜಕೀಯ ಉಲ್ಲೇಖಿಸುತ್ತಾ ಮೊದಲು ಶಿವಸೇನಾ ಬಿಜೆಪಿಯಿಂದ ಹೊರಬಂದಿತು, ನಂತರ ಶಿವಸೇನಾ ಶಿವಸೇನಾದಿಂದಲೇ ಹೊರಬಂದಿತು. ಎನ್‌ಸಿಪಿಯಿಂದ ಎನ್‌ಸಿಪಿ ಹೊರಬಂದಿತು. ಇವರೆಲ್ಲಾ ಒಂದು ಮತದಾರನಿಗೆ 9 ಬಟನ್‌ಗಳನ್ನು ನೀಡಿದ್ದಾರೆ. ಥಾಣೆಯು ರಾಜಕೀಯ ಭದ್ರಕೋಟೆಯಾಗಿದ್ದು, ಗದ್ದಾರ್ (ದ್ರೋಹಿ) ಆಳ್ವಿಕೆ ಎಂದು ಪರೋಕ್ಷವಾಗಿ ಹಾಡು ಹೇಳುತ್ತಾ ಟೀಕಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಾಸ್ಯ ವಿರುದ್ಧ ಶಿಂಧೆ ಬಣದ ಶಿವಸೇನೆ ಸಂಸದ ನರೇಶ್ ಮ್ಹಾಸ್ಕೆ ಅವರು ಕಾಮ್ರಾ ವಿರುದ್ಧ ಕಿಡಿಕಾರಿದ್ದರು. ಈತ ಉದ್ದವ್ ಠಾಕ್ರೆ ಅವರ ಶಿವಸೇನಾ (UBT)ಯಿಂದ ಹಣ ಪಡೆದು ಏಕನಾಥ್ ಶಿಂಧೆ ಅವರನ್ನು ಟೀಕಿಸಲು ನೇಮಕಗೊಂಡಿದ್ದಾರೆ ಎಂದು ಆರೋಪಿಸಿದ್ದರು.
"ಕುನಾಲ್ ಕಾಮ್ರಾ ಬಾಡಿಗೆಗೆ ಪಡೆದ ಹಾಸ್ಯನಟ, ಅವರು ಹಣಕ್ಕಾಗಿ ನಮ್ಮ ನಾಯಕರ ಬಗ್ಗೆ ಟೀಕೆಗಳನ್ನು ಮಾಡುತ್ತಿದ್ದಾರೆ. ಮಹಾರಾಷ್ಟ್ರ ಮಾತ್ರವಲ್ಲ, ಕುನಾಲ್ ಕಾಮ್ರಾ ಭಾರತದಲ್ಲಿ ಎಲ್ಲಿಯೂ ಮುಕ್ತವಾಗಿ ಓಡಾಡಲು ಸಾಧ್ಯವಿಲ್ಲ, ಶಿವಸೈನಿಕರು ಅವರಿಗೆ ಅವರ ಸ್ಥಾನವನ್ನು ತೋರಿಸುತ್ತಾರೆಂದು ಕಿಡಿಕಾರಿದ್ದರು.
ಶಿವಸೇನಾ ವಕ್ತಾರ ಕೃಷ್ಣ ಹೆಗ್ಡೆ ಅವರು ಮಾತನಾಡಿ, ಕುನಾಲ್ ಕಾಮ್ರಾ ಹೇಳಿಕೆಯು ಯಾವೊಬ್ಬ 'ಶಿವ ಸೈನಿಕ'ನಿಗೂ ಇಷ್ಟವಾಗಿಲ್ಲ. ಅವರಿಗೆ 'ಶಿವಸೇನಾ ಶೈಲಿಯ ಚಿಕಿತ್ಸೆ' ನೀಡಲಾಗುವುದು ಎಂದು ಹೇಳಿದ್ದರು.
ಈಗಾಗಲೇ ಕುನಾಲ್ ಕಾಮ್ರಾ ಅವರನ್ನು ವಿಮಾನಯಾನ ಸಂಸ್ಥೆಯೊಂದು ಪ್ರಯಾಣಿಸುವುದರಿಂದ ನಿಷೇಧ ಹೇರಿದೆ. ಇನ್ನೊಬ್ಬರನ್ನು ನಿಂದಿಸುವುದು, ಆ ಮೂಲಕ ಅಸಭ್ಯತೆಯನ್ನು ಮೆರೆಯುವ ಅವರ ಪರಿಪಾಠ ಹೆಚ್ಚಿದೆ. ಪೊಲೀಸರು ಈ ರೀತಿಯ ಅಪರಾಧಗಳನ್ನು ಮಾಡುತ್ತಲೇ ಇರುವ ಅಪರಾಧಿಗಳ ವಿರುದ್ಧ ಬಲವಾದ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಶಿವಸೇನಾ (ಶಿಂಧೆ ಬಣ) ಕಾರ್ಯಕರ್ತರು ಕಾಮ್ರಾ ಅವರ ಪ್ರದರ್ಶನ ನಡೆದ ಖಾರ್‌ನ ಹ್ಯಾಬಿಟಾಟ್ ಕಾಮಿಡಿ ಕ್ಲಬ್ ಮೇಲೆ ದಾಳಿ ನಡೆಸಿ, ಹಾನಿ ಮಾಡಿದ್ದಾರೆ. ಕ್ಲಬ್'ಗೆ ಸೇರಿದ ಆಸ್ತಿಯನ್ನು ಧ್ವಂಸಗೊಳಿಸಿ, ಕಾಮ್ರಾ ತಮ್ಮ ಟೀಕೆಗಳನ್ನು ಮುಂದುವರಿಸಿದರೆ ಮತ್ತಷ್ಟು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಅಲ್ಲದೆ, ಕುನಾಲ್ ಕಾಮ್ರಾ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ನಡುವೆ ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಅವರು "ಕುನಾಲ್ ಕಾ ಕಮಲ್" ಎಂಬ ವೀಡಿಯೊವನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆದಿತ್ಯ ಠಾಕ್ರೆ ಅವರು ಪ್ರತಿಕ್ರಿಯಿಸಿ "ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲವೇ? ಏಕನಾಥ್ ಮಿಂಧೆ ಅವರಿಂದ ರಾಜ್ಯದ ಮುಖ್ಯಮಂತ್ರಿ ಮತ್ತು ಗೃಹ ಸಚಿವರನ್ನು ದುರ್ಬಲಗೊಳಿಸುವ ಮತ್ತೊಂದು ಪ್ರಯತ್ನ ಎಂದು ಹೇಳಿದ್ದಾರೆ.
Advertisement