
ರಾಯ್ಪುರ್: ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಛತ್ತಿಸ್‌ಗಢದ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭೂಪೇಶ್ ಬಘೇಲ್ ಅವರ ನಿವಾಸದ ಮೇಲೆ ಕೇಂದ್ರೀಯ ತನಿಖಾ ದಳದ ಅಧಿಕಾರಿಗಳು ಬುಧವಾರ ಬೆಳಗ್ಗೆ ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ರಾಯಪುರ ಮತ್ತು ಭಿಲಾಯಿಯಲ್ಲಿರುವ ಬಘೇಲ್ ಅವರ ನಿವಾಸ ಹಾಗೂ ಹಿರಿಯ ಪೊಲೀಸ್ ಅಧಿಕಾರಿ ಮತ್ತು ಮಾಜಿ ಮುಖ್ಯಮಂತ್ರಿಯ ಆಪ್ತ ಸಹಾಯಕರ ಮನೆಗಳ ಮೇಲೆ ಸಿಬಿಐ ದಾಳಿ ನಡೆಸಿದೆ.
ಅಕ್ರಮ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಘೇಲ್ ಅವರ ಮನೆಯ ಮೇಲೆ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಸಿಬಿಐ ಕ್ರಮ ಕೈಗೊಂಡಿದೆ.
ಸಿಬಿಐ ದಾಳಿ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಭೂಪೇಶ್ ಬಘೇಲ್ ಅವರು, ಏಪ್ರಿಲ್ 8 ಮತ್ತು 9 ರಂದು ಅಹಮದಾಬಾದ್ (ಗುಜರಾತ್) ನಲ್ಲಿ ನಡೆಯಲಿರುವ ಎಐಸಿಸಿ ಸಭೆಗಾಗಿ ರಚಿಸಲಾದ ‘ಕರಡು ಸಮಿತಿ’ ಸಭೆಗಾಗಿ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಇಂದು ದಿಲ್ಲಿಗೆ ತೆರಳಬೇಕಿತ್ತು. ಅದಕ್ಕೂ ಮುನ್ನ ಸಿಬಿಐ ರಾಯ್‌ಪುರ ಮತ್ತು ಭಿಲಾಯಿ ನಿವಾಸಕ್ಕೆ ತಲುಪಿದೆ ಎಂದು ಹೇಳಿದ್ದಾರೆ.
ಕಳೆದ ಮಾರ್ಚ್ 10 ರಂದು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಪೇಶ್ ಬಘೇಲ್ ನಿವಾಸ ಮತ್ತು ಅವರ ಪುತ್ರ ಚೈತನ್ಯ ಬಘೇಲ್ ಅವರ ನಿವಾಸ, ಸೇರಿ ದುರ್ಗ್ ಜಿಲ್ಲೆಯ 14 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ಸರಣಿ ದಾಳಿ ನಡೆಸಿತ್ತು.
ಮಹದೇವ್ ಬೆಟ್ಟಿಂಗ್ ಆ್ಯಪ್ ಪ್ರವರ್ತಕರು (Mahadev Betting App Promoters) ಭೂಪೇಶ್ ಬಘೇಲ್ ಅವರಿಗೆ ಸುಮಾರು 508 ಕೋಟಿ ರೂ. ಲಂಚ ನೀಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಈ ಹಿಂದೆಯೇ ಹೇಳಿತ್ತು. ಈ ಹಿಂದೆ ದಾಳಿ ನಡೆಸಿದಾಗ 5.39 ಕೋಟಿ ರೂ. ನಗದು ವಶಪಡಿಸಿಕೊಂಡಿತ್ತು. ಜೊತೆಗೆ ದಾಳಿ ವೇಳೆ 15 ಕೋಟಿ ರೂ. ಇರುವ ಬ್ಯಾಂಕ್ ಖಾತೆಯನ್ನೂ ಜಪ್ತಿ ಮಾಡಿತ್ತು.
Advertisement