
ನವದೆಹಲಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಸದನದಲ್ಲಿ ಮಾತನಾಡಲು 'ಅವಕಾಶ ನಿರಾಕರಿಸಲಾಗಿದೆ' ಎಂದು ಆರೋಪಿಸಿ ಕಾಂಗ್ರೆಸ್ ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ನೀಡಿದ ಒಂದು ದಿನದ ನಂತರ, ಇಂಡಿಯಾ ಮೈತ್ರಿಕೂಟದ ನಾಯಕರ ನಿಯೋಗವು ಗುರುವಾರ ಬಿರ್ಲಾ ಅವರನ್ನು ಭೇಟಿ ಮಾಡಿ ಕೇಂದ್ರ ಸರ್ಕಾರವು ಸಂಸದೀಯ ಕಾರ್ಯವಿಧಾನಗಳನ್ನು ಕಡೆಗಣಿಸಿದೆ ಎಂಬ ಆರೋಪಿಸಿ ಮನವಿ ಪತ್ರ ಸಲ್ಲಿಸಿತು.
ನಿಯೋಗದಲ್ಲಿ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್, ಸಮಾಜವಾದಿ ಪಕ್ಷದ(ಎಸ್‌ಪಿ) ಧರ್ಮೇಂದ್ರ ಯಾದವ್, ಡಿಎಂಕೆಯ ಎ ರಾಜಾ, ಟಿಎಂಸಿಯ ಕಲ್ಯಾಣ್ ಬ್ಯಾನರ್ಜಿ ಮತ್ತು ಎನ್‌ಸಿಪಿಯ ಸುಪ್ರಿಯಾ ಸುಳೆ ಸೇರಿದಂತೆ ಇತರರು ಇದ್ದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೊಗೊಯ್, ಇಂಡಿಯಾ ಮೈತ್ರಿಕೂಟದ ನಾಯಕರು ಸರ್ಕಾರದಿಂದ ಸಂಸದೀಯ ಕಾರ್ಯವಿಧಾನಗಳ ಉಲ್ಲಂಘನೆಯ ಬಗ್ಗೆ ಹಲವು ವಿಷಯಗಳನ್ನು ಎತ್ತಿದ್ದಾರೆ ಎಂದರು.
ಮನವಿ ಪತ್ರದಲ್ಲಿ, ಇಂಡಿಯಾ ಬ್ಲಾಕ್ ನಾಯಕರು, ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಗೆ ಸದನದಲ್ಲಿ ಮಾತನಾಡಲು ಅವಕಾಶ ನಿರಾಕರಿಸುವುದು ಸೇರಿದಂತೆ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ.
"ಸಂಪ್ರದಾಯದಂತೆ, ಎಲ್‌ಒಪಿ ಎದ್ದು ನಿಂತಾಗಲೆಲ್ಲಾ ಅವರಿಗೆ ಮಾತನಾಡಲು ಅವಕಾಶ ನೀಡಬೇಕು. ಇದನ್ನು ಶಾಖೇರ್ ಮತ್ತು ಕೌಲ್ ಅವರ ಸಂಸದೀಯ ಅಭ್ಯಾಸಗಳಲ್ಲಿ ದಾಖಲಿಸಲಾಗಿದೆ. ಆದಾಗ್ಯೂ, ಪ್ರಸ್ತುತ ಸರ್ಕಾರವು ಔಪಚಾರಿಕವಾಗಿ ವಿನಂತಿಸಿದಾಗಲೂ ಎಲ್‌ಒಪಿಗೆ ಮಾತನಾಡುವ ಅವಕಾಶವನ್ನು ಪದೇ ಪದೇ ನಿರಾಕರಿಸುತ್ತದೆ. ಇದು ಹಿಂದಿನ ಅಭ್ಯಾಸಗಳಿಂದ ನಿರ್ಗಮನವಾಗಿದೆ, ಅಲ್ಲಿ ಘರ್ಷಣೆಯ ಸಂದರ್ಭಗಳಲ್ಲಿಯೂ ಸಹ, ಎಲ್‌ಒಪಿಯನ್ನು ಕೇಳಲಾಗುತ್ತಿತ್ತು," ಎಂದು ಜ್ಞಾಪಕ ಪತ್ರದಲ್ಲಿ ತಿಳಿಸಲಾಗಿದೆ.
ರಾಹುಲ್ ಗಾಂಧಿ ಅವರನ್ನು ಬೆಂಬಲಿಸಿ ಇಂಡಿಯಾ ಬ್ಲಾಕ್ ಪಕ್ಷಗಳು ಒಟ್ಟುಗೂಡಿರುವುದರಿಂದ ಈ ವಿಷಯವು ಸರ್ಕಾರ ಮತ್ತು ವಿರೋಧ ಪಕ್ಷದ ನಡುವಿನ ಹೊಸ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
ಸ್ಪೀಕರ್ ಓಂ ಬಿರ್ಲಾ ಅವರು ಸಂಸತ್ತಿನಲ್ಲಿ ನನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ಸ್ಪೀಕರ್ ಸದನವನ್ನು 'ಪ್ರಜಾಪ್ರಭುತ್ವ ವಿರೋಧಿ ಶೈಲಿಯಲ್ಲಿ' ನಡೆಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಬುಧವಾರ ಆರೋಪಿಸಿದ್ದರು.
"ನಾನು ಮಾತನಾಡಲು ಎದ್ದು ನಿಂತಾಗಲೆಲ್ಲಾ ಸ್ಪೀಕರ್ ಅದಕ್ಕೆ ಅವಕಾಶವನ್ನೇ ನೀಡುತ್ತಿಲ್ಲ. ಕಳೆದ 7-8 ದಿನಗಳಿಂದ ಇದೇ ಪರಿಸ್ಥಿತಿ ಪುನರಾವರ್ತನೆಯಾಗುತ್ತಿದೆ. ಇದು ವಿಪಕ್ಷಗಳ ಧ್ವನಿಯನ್ನು ಅಡಗಿಸಲು ಸರ್ಕಾರ ಹೂಡಿರುವ ಹೊಸ ತಂತ್ರವಾಗಿದೆ. ಕಳೆದ ವಾರ ಲೋಕಸಭೆಯಲ್ಲಿ ಮಹಾಕುಂಭ ಮೇಳದ ಬಗ್ಗೆ ಪ್ರಧಾನಿ ಮೋದಿ ಭಾಷಣದ ಬಳಿಕವೂ, ನನಗೆ ಮಾತನಾಡಲು ಸ್ಪೀಕರ್ ಅವಕಾಶವನ್ನು ನೀಡಲಿಲ್ಲ. ಸರ್ಕಾರ ವಿಪಕ್ಷ ನಾಯಕರ ಮಾತುಗಳನ್ನು ಕೇಳಿಸಿಕೊಳ್ಳಲಾರದಷ್ಟು ಅಸಹನೆ ಹೊಂದಿದೆಯೇ..?" ಎಂದು ರಾಹುಲ್ ಗಾಂಧಿ ಮಾರ್ಮಿಕವಾಗಿ ಪ್ರಶ್ನಿಸಿದರು.
Advertisement