
ನವದೆಹಲಿ: ಎಟಿಎಂ ನಗದು ಹಿಂಪಡೆಯುವಿಕೆಯ ಮೇಲಿನ ಶುಲ್ಕವನ್ನು ಹೆಚ್ಚಿಸಲು ಬ್ಯಾಂಕುಗಳಿಗೆ ಅವಕಾಶ ನೀಡುವ ಆರ್‌ಬಿಐ ನಿರ್ಧಾರದ ಕುರಿತು ಶನಿವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿಯವರು ಬ್ಯಾಂಕುಗಳನ್ನು ನಾಗರಿಕರನ್ನು 'ಲೂಟಿ' ಮಾಡಲು 'ಕಲೆಕ್ಷನ್ ಏಜೆಂಟ್'ಗಳನ್ನಾಗಿ ಮಾಡಿದೆ. ಬೆಲೆ ಏರಿಕೆ ಮತ್ತು 'ಲೂಟಿ' ಬಿಜೆಪಿಯ ಮಂತ್ರವಾಗಿದೆ ಎಂದಿದ್ದಾರೆ.
'ದುರದೃಷ್ಟವಶಾತ್, ನಮ್ಮ ಬ್ಯಾಂಕುಗಳನ್ನು ಮೋದಿ ಸರ್ಕಾರ 'ಕಲೆಕ್ಷನ್ ಏಜೆಂಟ್'ಗಳನ್ನಾಗಿ ಮಾಡಿದೆ! ಎಟಿಎಂ ವಿತ್‌ಡ್ರಾ ಶುಲ್ಕಗಳು ದುಬಾರಿಯಾಗಿವೆ. 2018 ಮತ್ತು 2024ರ ನಡುವೆ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದ ಕಾರಣ ಉಳಿತಾಯ ಖಾತೆಗಳು ಮತ್ತು ಜನ ಧನ್ ಖಾತೆಗಳಿಂದ ನರೇಂದ್ರ ಮೋದಿ ಸರ್ಕಾರ ಕನಿಷ್ಠ 43,500 ಕೋಟಿ ರೂ. ಸಂಗ್ರಹಿಸಿದೆ' ಎಂದು ಹೇಳಿದರು.
'ಪ್ರತಿ ವರ್ಷ 100 ರಿಂದ 200 ರೂ. ನಿಷ್ಕ್ರಿಯತೆಯ ಶುಲ್ಕ, ಬ್ಯಾಂಕ್ ಸ್ಟೇಟ್‌ಮೆಂಟ್ ನೀಡಲು 50 ರಿಂದ 100 ರೂ. ಶುಲ್ಕ, ಎಸ್ಎಂಎಸ್ ಅಲರ್ಟ್‌ಗಳಿಗೆ ಪ್ರತಿ ತ್ರೈಮಾಸಿಕಕ್ಕೆ 20 ರಿಂದ 25 ರೂ. ವಿಧಿಸಲಾಗುತ್ತಿದೆ. ಸಾಲ ಸಂಸ್ಕರಣಾ ಶುಲ್ಕವಾಗಿ ಶೇ 1-3 ರಷ್ಟು ಶುಲ್ಕ ವಿಧಿಸುತ್ತವೆ. ಬ್ಯಾಂಕುಗಳು ಸಾಲವನ್ನು ಸಮಯಕ್ಕೆ ಸರಿಯಾಗಿ ಪಾವತಿಸಿದರೆ, ಲೋನ್ ಪ್ರೀ-ಕ್ಲೋಸರ್ ಶುಲ್ಕವನ್ನು ವಿಧಿಸುತ್ತವೆ. NEFT ಮತ್ತು ಡಿಮ್ಯಾಂಡ್ ಡ್ರಾಫ್ಟ್ ಶುಲ್ಕಗಳು ಕೂಡ ಹೆಚ್ಚುವರಿ ಹೊರೆಯಾಗಿದೆ. ಸಹಿ ಬದಲಾವಣೆಗಳಂತಹ KYC ನವೀಕರಣಗಳಿಗೂ ಸಹ ಶುಲ್ಕವನ್ನು ವಿಧಿಸುತ್ತವೆ' ಎಂದು ಹೇಳಿದರು.
'ಈ ಹಿಂದೆ, ಕೇಂದ್ರ ಸರ್ಕಾರವು ಬ್ಯಾಂಕ್ ಶುಲ್ಕಗಳಿಂದ ಸಂಗ್ರಹಿಸಲಾದ ಮೊತ್ತದ ಅಂಕಿ ಅಂಶಗಳನ್ನು ಸಂಸತ್ತಿನಲ್ಲಿ ನೀಡುತ್ತಿತ್ತು. ಆದರೆ, ಈಗ 'RBI ಅಂತಹ ಮಾಹಿತಿಯನ್ನು ನಿರ್ವಹಿಸುವುದಿಲ್ಲ' ಎಂದು ಹೇಳುವ ಮೂಲಕ ಈ ಅಭ್ಯಾಸವನ್ನು ನಿಲ್ಲಿಸಿದೆ. 'ನೋವಿನ ಬೆಲೆ ಏರಿಕೆ + ಅನಿಯಂತ್ರಿತ ಲೂಟಿ = ಸುಲಿಗೆಗೆ ಬಿಜೆಪಿಯ ಮಂತ್ರ!' ಎಂದು ಖರ್ಗೆ ಪೋಸ್ಟ್ ಮಾಡಿದ್ದಾರೆ' ಎಂದು ತಿಳಿಸಿದರು.
ಗ್ರಾಹಕರು ಎಟಿಎಂನಿಂದ ಹಣ ಪಡೆಯುವುದಕ್ಕೆ ನಿಗದಿಪಡಿಸಿರುವ ಶುಲ್ಕ ಹೆಚ್ಚಿಸಲು ಬ್ಯಾಂಕುಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶುಕ್ರವಾರ ಅನುಮತಿ ನೀಡಿದೆ. ಉಚಿತ ಮಾಸಿಕ ಬಳಕೆಯನ್ನು ಮೀರಿ ಎಟಿಎಂನಿಂಗ ನಗದು ಹಿಂಪಡೆಯುವಿಕೆಯ ಮೇಲಿನ ಶುಲ್ಕವನ್ನು ಮೇ 1 ರಿಂದ ಪ್ರತಿ ವಹಿವಾಟಿಗೆ 2 ರಿಂದ 23 ರೂ.ನಷ್ಟು ಹೆಚ್ಚಿಸಲು ಅನುಮತಿ ನೀಡಿದೆ.
Advertisement