ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರಿಗೆ SC ಸ್ಥಾನಮಾನ ಸಿಗಲ್ಲ: ಆಂಧ್ರ ಹೈಕೋರ್ಟ್

ಒಂದು ದಶಕಕ್ಕೂ ಹೆಚ್ಚು ಕಾಲ ಪಾದ್ರಿಯಾಗಿದ್ದ ಆನಂದ್, ಅಕ್ಕಲಾ ರಾಮಿರೆಡ್ಡಿ ಮತ್ತಿತರರು ತನ್ನ ಜಾತಿಯ ಆಧಾರದ ಮೇಲೆ ನಿಂದಿಸಿದ್ದಾರೆ ಎಂದು ಆರೋಪಿಸಿ ಜನವರಿ 2021 ರಂದು ಚಂದೋಲು ಪೊಲೀಸರಿಗೆ ದೂರು ನೀಡಿದ್ದರು.
Casual Images
ಸಾಂದರ್ಭಿಕ ಚಿತ್ರ
Updated on

ವಿಜಯವಾಡ: ಪರಿಶಿಷ್ಟ ಜಾತಿಗೆ (ಎಸ್‌ಸಿ) ಸೇರಿದ ವ್ಯಕ್ತಿಗಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ತಕ್ಷಣ ತಮ್ಮ SC ಸ್ಥಾನಮಾನವನ್ನು ಕಳೆದುಕೊಳ್ಳುತ್ತಾರೆ. ಆ ಮೂಲಕ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ರಕ್ಷಣೆಯನ್ನು ಕಳೆದುಕೊಳ್ಳುತ್ತಾರೆ ಎಂದು ಆಂಧ್ರಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ. ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ದೂರು ದಾಖಲಿಸಿದ್ದ ಗುಂಟೂರು ಜಿಲ್ಲೆಯ ಕೊತ್ತಪಾಲೆಂನ ಪಾದ್ರಿ ಚಿಂತದ ಆನಂದ್ ಅವರ ಪ್ರಕರಣಕ್ಕೆ ಪ್ರತಿಕ್ರಿಯೆಯಾಗಿ ನ್ಯಾಯಮೂರ್ತಿ ಎನ್ ಹರಿನಾಥ್ ಅವರು ಈ ತೀರ್ಪು ನೀಡಿದ್ದಾರೆ.

ಒಂದು ದಶಕಕ್ಕೂ ಹೆಚ್ಚು ಕಾಲ ಪಾದ್ರಿಯಾಗಿದ್ದ ಆನಂದ್, ಅಕ್ಕಲಾ ರಾಮಿರೆಡ್ಡಿ ಮತ್ತಿತರರು ತನ್ನ ಜಾತಿಯ ಆಧಾರದ ಮೇಲೆ ನಿಂದಿಸಿದ್ದಾರೆ ಎಂದು ಆರೋಪಿಸಿ ಜನವರಿ 2021 ರಂದು ಚಂದೋಲು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ರಾಮಿರೆಡ್ಡಿ ಮತ್ತಿತರರು ಪ್ರಕರಣವನ್ನು ವಜಾಗೊಳಿಸುವಂತೆ ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು.

ಆನಂದ್ ಅವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು ಹತ್ತು ವರ್ಷಗಳ ಕಾಲ ಪಾದ್ರಿಯಾಗಿ ಸೇವೆ ಸಲ್ಲಿಸಿದ ನಂತರ ಸಂವಿಧಾನ (ಪರಿಶಿಷ್ಟ ಜಾತಿಗಳು) ಆದೇಶ, 1950 ರ ಅಡಿಯಲ್ಲಿ ಎಸ್‌ಸಿ ಸದಸ್ಯರಾಗಿ ಅರ್ಹತೆ ಪಡೆದಿಲ್ಲ ಎಂದು ಅರ್ಜಿದಾರರ ವಕೀಲ ಫಣಿ ದತ್ ವಾದಿಸಿದರು. ಪ್ರತಿವಾದ ಮಂಡಿಸಿದ ಆನಂದ್ ಪರ ವಕೀಲ ಈರ್ಲ ಸತೀಶ್ ಕುಮಾರ್, ಆನಂದ್ ಅವರು ಎಸ್ಸಿ ಹಿಂದೂ ಜಾತಿ ಪ್ರಮಾಣಪತ್ರವನ್ನು ಹೊಂದಿದ್ದು, ಕಾಯ್ದೆಯಡಿ ರಕ್ಷಣೆಗೆ ಅರ್ಹತೆ ಹೊಂದಿರುವುದಾಗಿ ಪ್ರತಿಪಾದಿಸಿದರು.

ಆದಾಗ್ಯೂ, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವುದರಿಂದ, ಜಾತಿ ಭೇದಗಳು ಇರಲ್ಲ.ಯಾವುದೇ ಜಾತಿ ಪ್ರಮಾಣವನ್ನು ಹೊಂದಿದ್ದರೂ ಅದನ್ನು ಲೆಕ್ಕಿಸದೆ SC ಸ್ಥಾನಮಾನವನ್ನು ರದ್ದಾಗುತ್ತದೆ ಎಂದು ನ್ಯಾಯಮೂರ್ತಿ ಹರಿನಾಥ್ ಸ್ಪಷ್ಟಪಡಿಸಿದ್ದಾರೆ. ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳನ್ನು ತಾರತಮ್ಯ ಮತ್ತು ದೌರ್ಜನ್ಯಗಳಿಂದ ರಕ್ಷಿಸಲು ಎಸ್‌ಸಿ/ಎಸ್‌ಟಿ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಆದರೆ ಅದರ ನಿಬಂಧನೆಗಳು ಇತರ ಧರ್ಮಗಳಿಗೆ ಮತಾಂತರಗೊಂಡವರಿಗೆ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಪರಿಗಣಿಸಿತು.

Casual Images
SC ಒಳ ಮೀಸಲಾತಿ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ತೆಲಂಗಾಣ; ಅಧಿಸೂಚನೆ ಪ್ರಕಟ

ಆನಂದ್ ಅವರು ಸುಳ್ಳು ದೂರು ದಾಖಲಿಸುವ ಮೂಲಕ ಎಸ್‌ಸಿ/ಎಸ್‌ಟಿ ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ನ್ಯಾಯಾಲಯ ಹೇಳಿತು. ಆನಂದ್ ಪಾದ್ರಿಯಾಗಿ ಒಂದು ದಶಕ ಕಾರ್ಯನಿರ್ವಹಿಸಿರುವುದನ್ನು ಸಾಕ್ಷಿಗಳು ದೃಢಪಡಿಸಿದರು. ಅವರ ಸ್ಥಿತಿಯನ್ನು ಪರಿಶೀಲಿಸದೆ ಪ್ರಕರಣವನ್ನು ದಾಖಲಿಸಿದ್ದಕ್ಕಾಗಿ ಪೊಲೀಸರ ಕ್ರಮವನ್ನು ಟೀಕಿಸಿದ ನ್ಯಾಯಮೂರ್ತಿ ಹರಿನಾಥ್ ಅವರು ರಾಮಿರೆಡ್ಡಿ ಮತ್ತಿತರರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದರು.

ಆನಂದ್ ಅವರ ದೂರಿಗೆ ಕಾನೂನು ಮಾನ್ಯತೆ ಇಲ್ಲ ಎಂದು ಹೇಳಿದರು. ಆನಂದ್ ಅವರ ಜಾತಿ ಪ್ರಮಾಣಪತ್ರದ ಸಿಂಧುತ್ವವು ಅಧಿಕಾರಿಗಳ ಪರಿಶೀಲನೆಗೆ ಒಳಪಟ್ಟಿರುತ್ತದೆ. ಆದರೆ ಮತಾಂತರದ ನಂತರದ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ರಕ್ಷಣೆ ಸಿಗಲ್ಲ ಎಂದು ನ್ಯಾಯಾಧೀಶರು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com