
ಹೈದರಾಬಾದ್: ಪರಿಶಿಷ್ಟ ಜಾತಿ(ಎಸ್‌ಸಿ) ಉಪ-ವರ್ಗೀಕರಣ ಅಥವಾ ಎಸ್‌ಸಿ ಒಳ ಮೀಸಲಾತಿ ಜಾರಿಗೊಳಿಸಿ ತೆಲಂಗಾಣ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ. ಈ ಮೂಲಕ SC ಒಳ ಮೀಸಲಾತಿಯನ್ನು ಅಧಿಕೃತವಾಗಿ ಜಾರಿಗೆ ತಂದ ದೇಶದ ಮೊದಲ ರಾಜ್ಯವಾಗಿದೆ ಎಂದು ತೆಲಂಗಾಣ ನೀರಾವರಿ ಸಚಿವ ಎನ್ ಉತ್ತಮ್ ಕುಮಾರ್ ರೆಡ್ಡಿ ಅವರು ಹೇಳಿದ್ದಾರೆ.
SC ಒಳ ಮೀಸಲಾತಿ ಕುರಿತು ವರದಿ ನೀಡಲು ತೆಲಂಗಾಣ ಸರ್ಕಾರವು ಈ ಹಿಂದೆ ನಿವೃತ್ತ ಹೈಕೋರ್ಟ್ ನ್ಯಾಯಾಧೀಶ ಶಮೀಮ್ ಅಕ್ತರ್ ನೇತೃತ್ವದಲ್ಲಿ ಆಯೋಗ ರಚಿಸಿತ್ತು. ಈ ಆಯೋಗ ತೆಲಂಗಾಣದಲ್ಲಿ ಪರಿಶಿಷ್ಟ ಜಾತಿಗಳಲ್ಲಿ 59 ಉಪಜಾತಿಗಳನ್ನು ಸಮಿತಿ ಗುರುತಿಸಿದೆ ಮತ್ತು ಅಸ್ತಿತ್ವದಲ್ಲಿರುವ ಶೇ. 15 ರಷ್ಟು ಮೀಸಲಾತಿಯೊಳಗೆ ಅವುಗಳನ್ನು I, II ಮತ್ತು III ಎಂಬ ಮೂರು ಗುಂಪುಗಳಾಗಿ ವಿಂಗಡಿಸಲು ಶಿಫಾರಸುಗಳನ್ನು ಮಾಡಿತ್ತು.
"ಈ ಸಂಬಂಧ ತೆಲಂಗಾಣ ಸರ್ಕಾರ, ತೆಲಂಗಾಣ ಪರಿಶಿಷ್ಟ ಜಾತಿಗಳ ಮೀಸಲಾತಿ ಮಸೂದೆಯ್ನು ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕರಿಸಿದ್ದು, ಇದಕ್ಕೆ ಏಪ್ರಿಲ್ 8, 2025 ರಂದು ತೆಲಂಗಾಣ ರಾಜ್ಯಪಾಲರು ಅಂಕಿತ ಸಹ ಹಾಕಿದ್ದಾರೆ. ಇಂದು ಈ ಸಂಬಂಧ ಗೆಜೆಟ್ ಅಧಿಸೂಚನೆ ಪ್ರಕಟಿಸಲಾಗಿದೆ" ಎಂದು ಉತ್ತಮ್ ಕುಮಾರ್ ರೆಡ್ಡಿ ಅವರು ತಿಳಿಸಿದ್ದಾರೆ.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನದಂದೆ ತೆಲಂಗಾಣ ಸರ್ಕಾರ ಎಸ್ ಸಿ ಒಳ ಮೀಸಲಾತಿ ಜಾರಿಗೊಳಿಸಿ ಆದೇಶ ಹೊರಡಿಸಿದೆ.
ಆಯೋಗದ ವರದಿಯ ಪ್ರಕಾರ, ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ SC ಸಮುದಾಯಗಳನ್ನು ಒಳಗೊಂಡಿರುವ ಗುಂಪು-I ಒಂದಕ್ಕೆ ಶೇಕಡಾ ಒಂದು ಮೀಸಲಾತಿ ನೀಡಲಾಗುತ್ತದೆ.
ಮಧ್ಯಮ ಪ್ರಯೋಜನ ಪಡೆದ 18 ಉಪಜಾತಿಗಳ ಗುಂಪು -IIಗೆ ಶೇಕಡಾ 9 ರಷ್ಟು ಮೀಸಲಾತಿ ನೀಡಲಾಗುತ್ತದೆ ಮತ್ತು ಗಮನಾರ್ಹವಾಗಿ ಪ್ರಯೋಜನ ಪಡೆದ 26 ಉಪಜಾತಿಗಳನ್ನು ಒಳಗೊಂಡಿರುವ ಗುಂಪು III ಶೇ. 5 ರಷ್ಟು ಮೀಸಲಾತಿ ಪಡೆಯುತ್ತದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಸ್‌ಸಿ ಒಳ ಮೀಸಲಾತಿ ಉಪಸಮಿತಿಯ ನೇತೃತ್ವ ವಹಿಸಿದ್ದ ಸಚಿವ ರೆಡ್ಡಿ, ಇಂದು ಬೆಳಗ್ಗೆ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರಿಗೆ ಸರ್ಕಾರಿ ಆದೇಶದ ಮೊದಲ ಪ್ರತಿಯನ್ನು ನೀಡಲಾಗಿದೆ ಎಂದು ಹೇಳಿದರು.
"ಇಂದಿನಿಂದ, ಈ ಕ್ಷಣದಿಂದ, ತೆಲಂಗಾಣದಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಎಸ್‌ಸಿ ಒಳ ಮೀಸಲಾತಿ ಜಾರಿಗೆ ತರಲಾಗುವುದು. ನಾವು ಆ ಮಟ್ಟಿಗೆ ಸರ್ಕಾರಿ ಆದೇಶವನ್ನು ಹೊರಡಿಸಿದ್ದೇವೆ ಮತ್ತು ಮೊದಲ ಪ್ರತಿಯನ್ನು ಮುಖ್ಯಮಂತ್ರಿಗೆ ನೀಡಿದ್ದೇವೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
"ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರ ಎಸ್‌ಸಿ ಒಳ ಮೀಸಲಾತಿಯನ್ನು ಜಾರಿಗೆ ತಂದ ಮೊದಲ ರಾಜ್ಯ ತೆಲಂಗಾಣ" ಎಂದು ರೆಡ್ಡಿ ಹೇಳಿದರು.
Advertisement