
ನವದೆಹಲಿ: ಆಪರೇಷನ್ ಸಿಂಧೂರ ಕಾರ್ಯಾಚರಣೆಯಡಿ ಭಾರತ ನಡೆಸಿದ ದಾಳಿ ವೇಳೆಯಲ್ಲಿ ಪಾಕಿಸ್ತಾನದ ಕಿರಾನ್ ಹಿಲ್ಸ್ ನಲ್ಲಿರುವ ಪರಮಾಣು ಸ್ಥಾವರಗಳ ಮೇಲೆ ಭಾರತ ದಾಳಿ ಮಾಡಿತ್ತೇ? ಎಂಬ ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡುತ್ತಿದೆ.
ಸರ್ಗೋಧಾದ ಮುಶಾಫ್ ವಾಯುನೆಲೆಯಲ್ಲಿ ಭಾರತ ಧ್ವಂಸಗೊಳಿಸಿರುವುದಾಗಿ ಭಾರತ ಹೇಳಿಕೆ ನೀಡುತ್ತಿರುವಂತೆಯೇ ಸರ್ಗೋಧಾ ಜಿಲ್ಲೆಯ ಕಿರಾನಾ ಹಿಲ್ಸ್ ಕೆಳಗಿರುವ ಭೂಗತ ಪರಮಾಣು ಹಾಗೂ ಯುದ್ದೋಪಕರಣಗಳ ಸಂಗ್ರಹಗಾರ ಮೇಲೂ ಭಾರತ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ.
ಕಿರಾನಾ ಹಿಲ್ಸ್ ಸರ್ಗೋದಾ ಜಿಲ್ಲೆಯಲ್ಲಿರುವ ಒಂದು ವಿಶಾಲವಾದ ಪರ್ವತ ಶ್ರೇಣಿಯಾಗಿದ್ದು, ಪಾಕಿಸ್ತಾನದ ರಕ್ಷಣಾ ಸಚಿವಾಲಯದ ಸುಪರ್ದಿಯಲ್ಲಿದೆ. ಕಂದುಬಣ್ಣದ ಭೂಪ್ರದೇಶದಿಂದಾಗಿ ಸ್ಥಳೀಯವಾಗಿ ಇದು "ಕಪ್ಪು ಪರ್ವತಗಳು" ಎಂದು ಕರೆಯಲಾಗುತ್ತದೆ, ಇದು ರಬ್ವಾಹ್ ಮತ್ತು ಸರ್ಗೋಧಾ ನಗರದ ನಡುವೆ ಹರಡಿಕೊಂಡಿದೆ.
ಭಾನುವಾರ DGMO ಸುದ್ದಿಗೋಷ್ಠಿಯಲ್ಲಿ ಪಾಕಿಸ್ತಾನದ ಕಿರಾನಾ ಹಿಲ್ಸ್‌ನಲ್ಲಿರುವ ಪರಮಾಣು ಸ್ಥಾವರಗಳನ್ನು ಭಾರತೀಯ ಸಶಸ್ತ್ರ ಪಡೆಗಳು ಗುರಿಯಾಗಿಸಿಕೊಂಡಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿದ ವಾಯು ಕಾರ್ಯಾಚರಣೆಗಳ ಮಹಾನಿರ್ದೇಶಕ ಏರ್ ಮಾರ್ಷಲ್ ಎಕೆ ಭಾರ್ತಿ, ಭಾರತೀಯ ಸೇನಾ ಪಡೆಗಳು ಕಿರಾನಾ ಹಿಲ್ಸ್ ಗುರಿಯಾಗಿಸಿಕೊಂಡಿರಲಿಲ್ಲ. ಕಿರಾನ್ ಹಿಲ್ಸ್ ನಲ್ಲಿ ಕೆಲವು ಪರಮಾಣು ಸ್ಥಾವರಗಳಿವೆ ಎಂಬುದನ್ನು ತಿಳಿಸಿದ್ದಕ್ಕೆ ನಿಮಗೆ ಧನ್ಯವಾದಗಳು. ಅದರ ಬಗ್ಗೆ ನಮಗೆ ಗೊತ್ತಿಲ್ಲ. ಅಲ್ಲಿ ಏನೇ ಇದ್ದರೂ ನಾವು ಕಿರಾನಾ ಹಿಲ್ಸ್ ಹೊಡೆದಿಲ್ಲ ಎಂದು ಖಚಿತಪಡಿಸಿದರು.
ಪಾಕಿಸ್ತಾನದ ವಾಯು ರಕ್ಷಣಾ ರಾಡಾರ್‌ಗಳು, ಏರ್‌ಫೀಲ್ಡ್‌ಗಳು ಮತ್ತಿತರ ಮಿಲಿಟರಿ ನೆಲೆಗಳಲ್ಲಿ ವ್ಯಾಪಕ ಹಾನಿಯನ್ನು ವಿಡಿಯೋ ಸಾಕ್ಷ್ಯ ಮೂಲಕ ವಿವರಿಸಿದ ಎಕೆ ಭಾರ್ತಿ ಅವರು, ಸೇನಾ ಕಾರ್ಯಾಚರಣೆಗಳ ಸಂದರ್ಭದಲ್ಲಿ ಭಾರತೀಯ ಪಡೆಗಳ ಸನ್ನದ್ಧತೆ ಮತ್ತು ಕಾರ್ಯಕ್ಷಮತೆಯನ್ನು ಶ್ಲಾಘಿಸಿದರು. ಆಕಾಶ್ ವ್ಯವಸ್ಥೆಯಂತಹ ಸ್ವದೇಶಿ ವಾಯು ರಕ್ಷಣಾ ಶಸ್ತ್ರಾಸ್ತ್ರಗಳಿಂದ ಮಹತ್ವಪೂರ್ಣವಾದ ಕಾರ್ಯಾಚರಣೆ ನಡೆಸಲಾಗಿದೆ. ನಮ್ಮ ಎಲ್ಲಾ ಸೇನಾ ನೆಲೆಗಳು ಮತ್ತು ವ್ಯವಸ್ಥೆಗಳು ಯಾವುದೇ ಕಾರ್ಯಾಚರಣೆಯನ್ನು ಕೈಗೊಳ್ಳಲು ಸಿದ್ಧವಾಗಿವೆ" ಎಂದು ಅವರು ಹೇಳಿದರು.
ಭಾರತವು ರಾವಲ್ಪಿಂಡಿಯ ನೂರ್ ಖಾನ್ ಏರ್ ಬೇಸ್ ಪಾಕಿಸ್ತಾನದ ಪ್ರಮುಖ ಮಿಲಿಟರಿ ಕೇಂದ್ರವಾಗಿದ್ದು, ಇದನ್ನು ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳನ್ನು ನಿರ್ವಹಿಸುವ ಸ್ಟ್ರಾಟೆಜಿಕ್ ಪ್ಲಾನ್ಸ್ ಡಿವಿಷನ್ ನಿರ್ವಹಿಸುತ್ತದೆ. ಪಾಕಿಸ್ತಾನದ ಪರಮಾಣು ಸೌಲಭ್ಯಗಳ ಬಳಿ ಯಾವುದೇ ದಾಳಿ ನಡೆದರೂ, ಅದು ಅಮೆರಿಕದ ಗಂಭೀರ ಕಾಳಜಿಗೆ ಕಾರಣವಾಗುತ್ತದೆ ಎಂದು ನ್ಯೂಯಾರ್ಕ್ ಟೈಮ್ಸ್ ಹೇಳಿದೆ. ನೂರ್ ಖಾನ್ ಏರ್ ಬೇಸ್ ಮೇಲೆ ಭಾರತ ನಡೆಸಿದ ದಾಳಿ ಬಳಿಕ, ಕದನ ವಿರಾಮ ಒಪ್ಪಂದಕ್ಕೆ ಪಾಕಿಸ್ತಾನವನ್ನು ಒಪ್ಪಿಸಿವುದು ಅಮೆರಿಕದ ಪ್ರಮುಖ ಆದ್ಯತೆಯಾಗಿತ್ತು ಎಂಬುದು ಇದೀಗ ಗೊತ್ತಾಗಿದೆ.
Advertisement