
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಚ್ಚಲಾಗಿದ್ದ 32 ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಸೋಮವಾರ ಕಾರ್ಯಾಚರಣೆ ಪುನರಾರಂಭಗೊಂಡಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI)ದ ಅಧಿಕೃತ ಪತ್ರಿಕಾ ಹೇಳಿಕೆ ತಿಳಿಸಿದೆ.
ನವೀಕೃತ ಮಾಹಿತಿಗಳಿಗಾಗಿ ಮತ್ತು ವಿಮಾನದ ಸ್ಥಿತಿಯನ್ನು ಪರಿಶೀಲಿಸಲು ಪ್ರಯಾಣಿಕರು ವಿಮಾನಯಾನ ಸಂಸ್ಥೆಯನ್ನು ನೇರವಾಗಿ ಸಂಪರ್ಕಿಸುವಂತೆ AAI ಸೂಚಿಸಿದೆ.
ಪಾಕಿಸ್ತಾನದೊಂದಿಗಿನ ಸಂಘರ್ಷದ ಹಿನ್ನೆಲೆಯಲ್ಲಿ ಮೇ 9ರಂದು ನಾಗರಿಕ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಬಳಿಕ ಶ್ರೀನಗರ ಮತ್ತು ಅಮೃತಸರ ಸೇರಿದಂತೆ ಉತ್ತರ ಮತ್ತು ಪಶ್ಚಿಮ ಭಾರತದ ಹಲವಾರು ಪ್ರಮುಖ ವಿಮಾನ ನಿಲ್ದಾಣಗಳ ಮೇಲೆ ಪರಿಣಾಮ ಬೀರಿತ್ತು.
ಗಡಿಯಲ್ಲಿ ಹೆಚ್ಚಿದ ಉದ್ವಿಗ್ನತೆಯ ನಂತರ ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲು ಮತ್ತು ಮೇ 15 ರವರೆಗೆ ವಿಮಾನಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಸೂಚಿಸಲಾಗಿತ್ತು.
ಈ ವಿಮಾನ ನಿಲ್ದಾಣಗಳನ್ನು ಮತ್ತೆ ತೆರೆಯುವುದರಿಂದ ಸಾವಿರಾರು ಪ್ರಯಾಣಿಕರು, ವಿಮಾನಯಾನ ಸಿಬ್ಬಂದಿ ಮತ್ತು ವಿಮಾನಯಾನವನ್ನೇ ಅವಲಂಬಿಸಿದ್ದ ವ್ಯವಹಾರಗಳಿಗೆ ರಿಲೀಫ್ ಸಿಕ್ಕಂತಾಗಿದೆ.
'ಪ್ರಯಾಣಿಕರು ಮತ್ತು ಕಾರ್ಯಾಚರಣಾ ಸಿಬ್ಬಂದಿಯ ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆಯಾಗಿದೆ. ನಿಯಮಿತ ಕಾರ್ಯಾಚರಣೆಗಳಿಗೆ ಮರಳಲು ಅಗತ್ಯವಿರುವ ಎಲ್ಲ ಶಿಷ್ಟಾಚಾರಗಳನ್ನು ಅನುಸರಿಸಲಾಗುವುದು ಎಂದು ಎಎಐ ವಕ್ತಾರರು ಹೇಳಿದ್ದಾರೆ.
ಇಂಡಿಗೊ ಏರ್‌ಲೈನ್ಸ್ ಹೇಳಿಕೆಯಲ್ಲಿ, 'ಸರ್ಕಾರದ ನಿರ್ದೇಶನಗಳಿಗೆ ಅನುಗುಣವಾಗಿ ವಿಮಾನ ನಿಲ್ದಾಣಗಳು ಕಾರ್ಯಾಚರಣೆಗೆ ಮುಕ್ತವಾಗಿವೆ. ಈ ಹಿಂದೆ ಮುಚ್ಚಲಾಗಿದ್ದ ಮಾರ್ಗಗಳಲ್ಲಿ ನಾವು ಹಂತ ಹಂತವಾಗಿ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತೇವೆ. ರದ್ದಾದ ಟಿಕೆಟ್‌ಗಳ ಮರುಪಾವತಿ ಮೇ 22ರವರೆಗೆ ಅನ್ವಯಿಸುತ್ತದೆ' ಎಂದು ತಿಳಿಸಿದೆ.
ವಿಮಾನ ನಿಲ್ದಾಣಗಳ ಪಟ್ಟಿ
ಅಂಬಾಲಾ (ಹರಿಯಾಣ), ಹಿಂಡನ್ (ಉತ್ತರ ಪ್ರದೇಶ), ನಲಿಯಾ (ಗುಜರಾತ್), ಸರ್ಸಾವಾ (ಉತ್ತರ ಪ್ರದೇಶ), ಉತ್ತರಲೈ (ರಾಜಸ್ಥಾನ), ಶ್ರೀನಗರ, ಆವಂತಿಪುರ ಮತ್ತು ಜಮ್ಮು (ಜಮ್ಮು ಮತ್ತು ಕಾಶ್ಮೀರ), ಅಮೃತಸರ, ಚಂಡೀಗಢ, ಲೂಧಿಯಾನ, ಪಟಿಯಾಲ, ಭಟಿಂಡಾ, ಆದಂಪುರ ಹಲ್ವಾರ ಮತ್ತು ಪಠಾಣ್‌ಕೋಟ್ (ಪಂಜಾಬ್), ಭುಂತರ್, ಶಿಮ್ಲಾ ಮತ್ತು ಕಂಗ್ರಾ-ಗಗ್ಗಲ್ (ಹಿಮಾಚಲ ಪ್ರದೇಶ), ಕಿಶನ್‌ಗಢ (ರಾಜಸ್ಥಾನ), ಥೋಯಿಸ್ ಮತ್ತು ಲೇಹ್ (ಲಡಾಖ್), ಮುಂದ್ರಾ, ಜಾಮ್‌ನಗರ, ಹಿರಾಸರ್, ಪೋರಬಂದರ್, ಕೇಶೋದ್, ಕಾಂಡ್ಲಾ ಮತ್ತು ಭುಜ್ (ಗುಜರಾತ್) ಮತ್ತು ಜೈಸಲ್ಮೇರ್, ಜೋಧ್‌ಪುರ ಮತ್ತು ಬಿಕಾನೇರ್ (ರಾಜಸ್ಥಾನ)
Advertisement