
ನವದೆಹಲಿ: ಕರ್ನಲ್ ಸೋಫಿಯಾ ಖುರೇಷಿ ಕುರಿತು ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿಕೊಂಡಿರುವ ಮಧ್ಯಪ್ರದೇಶ ಬಿಜೆಪಿ ಸಚಿವ ವಿಜಯ್ ಶಾ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಅಸ್ತು ಎಂದಿದೆ.
ತಮ್ಮ ವಿರುದ್ಧ ಮಧ್ಯ ಪ್ರದೇಶ ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಸಚಿವ ವಿಜಯ್ ಶಾ ಸಲ್ಲಿಸಿರುವ ಸಲ್ಲಿಸಿರುವ ಅರ್ಜಿಯನ್ನು ನಾಳೆ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.
ವಿಜಯ್ ಶಾ ಸಲ್ಲಿಸಿದ್ದ ಅರ್ಜಿ ಸ್ವೀಕಾರದ ವೇಳೆ ಮಾತನಾಡಿದ ಸುಪ್ರೀಂ ಕೋರ್ಟ್, "ನೀವು ಯಾವ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದೀರಿ" ಎಂದು ಪ್ರಶ್ನಿಸಿತು. ಅಲ್ಲದೆ ಮೊದಲು "ಹೋಗಿ ಕ್ಷಮೆಯಾಚಿಸಿ. ಸ್ವಲ್ಪ ಸಂವೇದನಾಶೀಲತೆ ತೋರಿಸಿ" ಎಂದು ನ್ಯಾಯಾಲಯವು ವಿಜಯ್ ಶಾ ವಿರುದ್ಧ ಕಿಡಿಕಾರಿದೆ.
ಆಪರೇಷನ್ ಸಿಂಧೂರ್ ಸಮಯದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳ ಕುರಿತು ಮಧ್ಯಪ್ರದೇಶ ಸಚಿವ ಕುನ್ವರ್ ವಿಜಯ್ ಶಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 152, 196(1)(ಬಿ), ಮತ್ತು 197(1)(ಸಿ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಜಬಲ್‌ಪುರದ ಮಧ್ಯಪ್ರದೇಶ ಹೈಕೋರ್ಟ್‌ನ ವಿಭಾಗೀಯ ಪೀಠವು ಅವರ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ತಕ್ಷಣ ಎಫ್‌ಐಆರ್ ದಾಖಲಿಸುವಂತೆ ನಿರ್ದೇಶಿಸಿದ ಬೆನ್ನಲ್ಲೇ ವಿಜಯ್ ಶಾ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಕ್ಷಮೆಯಾಚಿಸಿದ್ದ ವಿಜಯ್ ಶಾ
ಇನ್ನು ತಮ್ಮ ಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಲೇ ವಿಜಯ್ ಶಾ ಮಾಧ್ಯಮಗಳಲ್ಲಿ ಕ್ಷಮೆ ಯಾಚಿಸುವುದಾಗಿ ಹೇಳಿದ್ದರು. 'ನನ್ನ ಸಂಪೂರ್ಣ ಕುಟುಂಬ ಸೇನಾ ಹಿನ್ನಲೆಯಿಂದ ಬಂದಿದೆ. ನನ್ನ ಕುಟುಂಬದ ಅನೇಕ ಸದಸ್ಯರು ಹುತಾತ್ಮರಾಗಿದ್ದಾರೆ. ಇನ್ನೂ ಸಾಕಷ್ಟು ಮಂದಿ ಮಿಲಿಟರಿಯಲ್ಲಿದ್ದರು... ಸಹೋದರಿ ಸೋಫಿಯಾ ಖುರೇಷಿ ಬಗ್ಗೆ ನಾನು ಕನಸಿನಲ್ಲೂ ಆ ರೀತಿ ಭಾವಿಸಲು ಸಾಧ್ಯವಿಲ್ಲ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ.
ಸಿಸ್ಟರ್ ಸೋಫಿಯಾ ಜಾತಿ ಮತ್ತು ಧರ್ಮವನ್ನು ಮೀರಿ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಅವರು ನಮ್ಮ ಸ್ವಂತ ಸಹೋದರಿಗಿಂತ ಹೆಚ್ಚು ಗೌರವಾನ್ವಿತರು. ಅವರು ರಾಷ್ಟ್ರಕ್ಕೆ ಮಾಡಿದ ಸೇವೆಗೆ ನಾನು ಅವರಿಗೆ ನಮಸ್ಕರಿಸುತ್ತೇನೆ. ನಮ್ಮ ಕನಸಿನಲ್ಲಿಯೂ ಅವರನ್ನು ಅವಮಾನಿಸುವ ಬಗ್ಗೆ ನಾವು ಯೋಚಿಸಲು ಸಹ ಸಾಧ್ಯವಿಲ್ಲ. ಆದರೂ, ನನ್ನ ಮಾತುಗಳು ಸಮಾಜ ಮತ್ತು ಧರ್ಮಕ್ಕೆ ನೋವುಂಟು ಮಾಡಿದ್ದರೆ, ನಾನು ಒಂದಲ್ಲ ಹತ್ತು ಬಾರಿ ಕ್ಷಮೆಯಾಚಿಸಲು ಸಿದ್ಧನಿದ್ದೇನೆ" ಎಂದು ಅವರು ಹೇಳಿದ್ದಾರೆ.
ಇಷ್ಟಕ್ಕೂ ವಿಜಯ್ ಶಾ ಹೇಳಿದ್ದೇನು?
ಇಂದೋರ್ ಜಿಲ್ಲೆಯ ಮಾಹುವಿನ ರಾಯ್ಕುಂಡ ಗ್ರಾಮದಲ್ಲಿ ನಡೆದ ಹಲ್ಮಾ ಕಾರ್ಯಕ್ರಮದಲ್ಲಿ ವಿಜಯ್ ಶಾ ಅವರು ಮಾಡಿದ ಭಾಷಣದ ಕ್ಲಿಪ್ ಅನ್ನು ಕಾಂಗ್ರೆಸ್ ಪಕ್ಷ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಆ ವಿಡಿಯೋದಲ್ಲಿ ಸಚಿವ ವಿಜಯ್ ಶಾ, ಹಿಂದಿಯಲ್ಲಿ, "ಅವರು (ಭಯೋತ್ಪಾದಕರು) ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸಿಂಧೂರವನ್ನು ಒರೆಸುವ ಮೂಲಕ ಅವರನ್ನು ಅಗೌರವಗೊಳಿಸಿದ್ದರು. ಆದರೆ ಅವರಿಗೆ ಸೂಕ್ತ ಉತ್ತರ ನೀಡಲು ನಾವು ಅವರ ಸ್ವಂತ ಸಹೋದರಿಯನ್ನು ಕಳುಹಿಸಿದ್ದೇವೆ" ಎಂದು ಹೇಳುತ್ತಿರುವುದು ಕೇಳಿಬರುತ್ತದೆ. ಇಲ್ಲಿ ವಿಜಯ್ ಶಾ ಮುಸ್ಲಿಂ ಸಮುದಾಯಕ್ಕೆ ಸೇರಿದ ಉಗ್ರಗಾಮಿಗಳನ್ನು ಮುಸ್ಲಿಂ ಸಮುದಾಯಕ್ಕೆ ಸೇರಿದ ಮಹಿಳೆ ಕರ್ನಲ್ ಸೋಫಿಯಾ ಖುರೇಷಿ ಮಟ್ಟಹಾಕಿದ್ದಾರೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು.
Advertisement