
ನವದೆಹಲಿ: ಪಾಕಿಸ್ತಾನದೊಂದಿಗೆ ಕದನ ವಿರಾಮದ ಹೊರತಾಗಿಯೂ, ಭಾರತವು ಅದರ ಮೇಲೆ ನಿರ್ಬಂಧಗಳನ್ನು ಕಾಯ್ದುಕೊಂಡಿದೆ. ಸಿಂಧೂ ನದಿ ನೀರು ಒಪ್ಪಂದ ಇನ್ನೂ ಸ್ಥಗಿತಗೊಂಡಿದ್ದು, ಪಾಕಿಸ್ತಾನ ಪ್ರತಿ ಹನಿ ನೀರಿಗೂ ಹಾತೊರೆಯುವಂತೆ ಮಾಡಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಸಿಂಧೂ ನದಿ ನೀರಿನ ಕುರಿತು ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಅವರ ದೊಡ್ಡ ಹೇಳಿಕೆ ಹೊರಬಿದ್ದಿದೆ. ಸಿಂಧೂ ನದಿ ನೀರು ಒಪ್ಪಂದವು ಎಷ್ಟು ಸಮಯದವರೆಗೆ ಅಮಾನತಿನಲ್ಲಿ ಉಳಿಯುತ್ತದೆ ಎಂಬುದನ್ನು ಜೈಶಂಕರ್ ತಿಳಿಸಿದರು.
ಭಾರತ-ಪಾಕಿಸ್ತಾನದ ಉದ್ವಿಗ್ನತೆಯ ಕುರಿತು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್, "ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಲಾಗಿದೆ. ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಯನ್ನು ವಿಶ್ವಾಸಾರ್ಹವಾಗಿ ಮತ್ತು ಉಗ್ರತ್ವವನ್ನು ಸಂಪೂರ್ಣವಾಗಿ ನಿಲ್ಲಿಸುವವರೆಗೆ ಇದು ಅಮಾನತಿನಲ್ಲಿರುತ್ತದೆ. ಕಾಶ್ಮೀರದ ಬಗ್ಗೆ ಚರ್ಚಿಸಲು ಉಳಿದಿರುವ ಏಕೈಕ ವಿಷಯವೆಂದರೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭಾರತೀಯ ಪ್ರದೇಶವನ್ನು ಬಿಟ್ಟುಕೊಡುವುದು, ನಾವು ಈ ಚರ್ಚೆಗೆ ಸಿದ್ಧರಿದ್ದೇವೆ ಎಂದು ಹೇಳಿದರು.
"ನಮಗೆ ನಿಜವಾಗಿಯೂ ಅಂತಾರಾಷ್ಟ್ರೀಯ ಬೆಂಬಲ ಸಿಕ್ಕಿತು. ದುಷ್ಕರ್ಮಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂಬ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯ ನಮ್ಮಲ್ಲಿತ್ತು. ಮೇ 7ರಂದು ಆಪರೇಷನ್ ಸಿಂಧೂರ್ ಮೂಲಕ ಅವರನ್ನು ಹೊಣೆಗಾರರನ್ನಾಗಿ ಮಾಡಲಾಯಿತು ಎಂದು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಹೇಳಿದರು.
ಪಾಕಿಸ್ತಾನದೊಂದಿಗಿನ ನಮ್ಮ ಸಂಬಂಧಗಳು ಮತ್ತು ವ್ಯವಹಾರಗಳು ಸಂಪೂರ್ಣವಾಗಿ ದ್ವಿಪಕ್ಷೀಯವಾಗಿರುತ್ತವೆ ಎಂದು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಹೇಳಿದರು. ಇದು ವರ್ಷಗಳಿಂದ ರಾಷ್ಟ್ರೀಯ ಒಮ್ಮತವಾಗಿದೆ. ಇದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಪಾಕಿಸ್ತಾನದೊಂದಿಗಿನ ಮಾತುಕತೆ ಭಯೋತ್ಪಾದನೆಯ ಬಗ್ಗೆ ಮಾತ್ರ ಎಂದು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನವು ಹಸ್ತಾಂತರಿಸಬೇಕಾದ ಭಯೋತ್ಪಾದಕರ ಪಟ್ಟಿಯನ್ನು ಹೊಂದಿದೆ. ಅವರು ಭಯೋತ್ಪಾದಕ ಮೂಲಸೌಕರ್ಯವನ್ನು ಮುಚ್ಚಬೇಕು. ಅವರಿಗೆ ಏನು ಮಾಡಬೇಕೆಂದು ತಿಳಿದಿದೆ. ನಾವು ಅವರೊಂದಿಗೆ ಭಯೋತ್ಪಾದನೆಯನ್ನು ಚರ್ಚಿಸಲು ಸಿದ್ಧರಿದ್ದೇವೆ. ಇವು ಸಾಧ್ಯವಿರುವ ಮಾತುಕತೆಗಳು ಎಂದರು.
ಭಾರತ ಮತ್ತು ಪಾಕಿಸ್ತಾನ ನಡುವಿನ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆ ನಿಂತಿರುವ ಕುರಿತು ಮಾತನಾಡಿದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್, ಭಯೋತ್ಪಾದಕ ಮೂಲಸೌಕರ್ಯವನ್ನು ನಾಶಮಾಡುವ ಮೂಲಕ ನಾವು ನಿಗದಿಪಡಿಸಿದ ಗುರಿಗಳನ್ನು ಸಾಧಿಸಿದ್ದೇವೆ. ಪ್ರಮುಖ ಗುರಿಗಳನ್ನು ಸಾಧಿಸಿದಾಗಿನಿಂದ, ನಾವು ಸರಿಯಾದ ವಿಧಾನವನ್ನು ತೆಗೆದುಕೊಂಡಿದ್ದೇವೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಕಾರ್ಯಾಚರಣೆಯ ಆರಂಭದಲ್ಲಿಯೇ ನಾವು ಭಯೋತ್ಪಾದಕ ಮೂಲಸೌಕರ್ಯದ ಮೇಲೆ ದಾಳಿ ಮಾಡಲಾಗಿತ್ತು. ಮೇ 10ರ ಬೆಳಗಿಯೂ ನಮ್ಮ ದಾಳಿಗಳು ಪಾಕಿಸ್ತಾವನ್ನು ತೀವ್ರವಾಗಿ ಜರ್ಜರಿತವಾಗಿದೆ. ಉಪಗ್ರಹ ಚಿತ್ರಗಳು ನಾವು ಎಷ್ಟು ಹಾನಿ ಮಾಡಿದ್ದೇವೆ ಎಂಬುದನ್ನು ತೋರಿಸುತ್ತವೆ. ಗುಂಡಿನ ದಾಳಿಯನ್ನು ನಿಲ್ಲಿಸಲು ಯಾರು ಬಯಸಿದ್ದರು ಎಂಬುದು ಸ್ಪಷ್ಟವಾಗಿದೆ ಎಂದರು.
Advertisement